
ತುಮಕೂರು, ಫೆ.28- ವೈದ್ಯಲೋಕದಲ್ಲಿ ಪ್ರತಿದಿನ ಒಂದಲ್ಲ ಒಂದು ವಿಸ್ಮಯಗಳು, ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ.
ನಗರದ ಜಿಲ್ಲಾಸ್ಪತ್ರೆ ವೈದ್ಯರು ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 99 ಕಲ್ಲುಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು 45 ವರ್ಷದ ಮಹಿಳೆಯೊಬ್ಬರು ಹೊಟ್ಟೆನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ನಗರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ವೈದ್ಯರ ತಂಡ ಸತತ ಪರಿಶ್ರಮದಿಂದ ಮಹಿಳೆಯ ಉದರದಲ್ಲಿದ್ದ 99 ಕಲ್ಲುಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಯಶಸ್ವಿ ಶಸ್ತ್ರ ಚಿಕಿತ್ಸೆ ನಂತರ ವೈದ್ಯರು ಮಾತನಾಡಿ, ನಾವು ಕಿಡ್ನಿಸ್ಟೋನ್ ಬಗ್ಗೆ ಹಲವು ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ. ಆದರೆ, ಇದೊಂದು ವೈದ್ಯಲೋಕಕ್ಕೆ ಸವಾಲಾದ ಶಸ್ತ್ರಚಿಕಿತ್ಸೆಯಾಗಿದೆ. ಎರಡು-ಮೂರು ಕಲ್ಲುಗಳಿದ್ದರೆ ರೋಗಿಗಳು ನೋವು ತಡೆಯುವುದು ಒಂದು ಸಾಹಸ. ಆದರೆ, ಈ ಮಹಿಳೆ 99 ಕಲ್ಲುಗಳನ್ನಿಟ್ಟುಕೊಂಡು ನೋವು ನುಂಗಿಕೊಂಡಿದ್ದಾರೆ ಎಂದರು.
ಕಿಡ್ನಿಸ್ಟೋನ್ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ಸಮಸ್ಯೆಯಿಂದ ದೂರವಿರಬಹುದು. ಈ ಬಾರಿ ಬಿಸಿಲು ಬೇರೆ ಜೋರಾಗಿದೆ. ಹೆಚ್ಚು ನೀರು ಕುಡಿದರೆ ಒಳ್ಳೆಯದು ಎಂದು ವೈದ್ಯರು ಸಲಹೆ ನೀಡಿದ್ದಾರೆ.