ಮದುವೆಯಾಗುವುದಾಗಿ ನಂಬಿಸಿ ಮೋಸ: ಬಿಬಿಎಂಪಿ ಯೂನಿಯನ್ ಲೀಡರ್ವಿರುದ್ಧ ಮಹಿಳೆ ದೂರು
ಬೆಂಗಳೂರು, ಫೆ.27- ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಬಿಬಿಎಂಪಿ ಯೂನಿಯನ್ ಲೀಡರ್ ಹಾಗೂ ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವ ಮಾಯಣ್ಣ ಅವರು ಮೋಸ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರು ನಗರ ಪೆÇಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಮಾಯಣ್ಣ ತನ್ನನ್ನು ಪರಿಚಯ ಮಾಡಿಕೊಂಡು ನನ್ನೊಂದಿಗೆ ಸಲುಗೆಯಿಂದ ನಡೆದುಕೊಂಡಿದ್ದು, ತಮ್ಮ ಪತ್ನಿಗೆ ಮಾರಕ ಕಾಯಿಲೆ ಇದ್ದು, ನನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದರು. ಆದರೆ, ಇದೀಗ ನಿನಗೆ ಬೇರೊಬ್ಬರ ಜತೆ ಸಂಬಂಧವಿದೆ ಎಂದು ವಿನಾಕಾರಣ ಆರೋಪಿಸಿ ದೂರವಿಟ್ಟಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ವಿನಾಕಾರಣ ಮಾನಸಿಕ ಹಿಂಸೆ ನೀಡಿ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಅವರು ಈ ಹಿಂದೆ ನೀಡಿದ್ದ ಮನೆಯ ಭೋಗ್ಯದ ಹಣ ಹಾಗೂ ವಿವಿಧ ಸಾಮಗ್ರಿಗಳನ್ನು ಹಿಂದಿರುಗಿಸಲು ಒತ್ತಡ ಹೇರಿದ್ದಾರೆ. ಫೆ.6ರಂದು ನ್ಯಾಯ ಕೇಳುವ ಸಲುವಾಗಿ ಮೇಜರ್ರೋಡ್ ಕಚೇರಿಯಲ್ಲಿ ಮಾಯಣ್ಣ ಅವರನ್ನು ಭೇಟಿ ಮಾಡಲು ತೆರಳಿದ್ದಾಗ ಅವರ ಪತ್ನಿಯನ್ನು ಕರೆಸಿ ಇವರಿಬ್ಬರೂ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಭುವನೇಶ್ವರಿನಗರದಲ್ಲಿರುವ ನನ್ನ ವಾಸದ ಮನೆಗೆ ಬಂದು ಅವಾಚ್ಯಶಬ್ಧಗಳಿಂದ ನಿಂದಿಸಿರುವ ಮಾಯಣ್ಣ ಹಾಗೂ ಇನ್ನಿಬ್ಬರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಸಿಕೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಾಗಿದೆ.