ಚಿಟಗುಪ್ಪ ಸಮಗ್ರ ಅಭಿವೃದ್ಧಿಗೆ ಪ್ರಯತ್ನ: ರಾಜಶೇಖರ.ಬಿ.ಪಾಟೀಲ್
ಬೀದರ ಫೆ.27:- ಹೊಸದಾಗಿ ಅಸ್ಥಿತ್ವಕ್ಕೆ ಬಂದಿರುವ ಚಿಟಗುಪ್ಪಾ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ನೆರವು ನೀಡಲಾಗುತ್ತದೆ ಎಂದು ಶಾಸಕರು ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದ ಅಧ್ಯಕ್ಷರಾದ ರಾಜಶೇಖರ.ಬಿ.ಪಾಟೀಲ್ ಅವರು ತಿಳಿಸಿದರು.
ಜಿಲ್ಲಾಡಳಿತದ ವತಿಯಿಂದ ಚಿಟಗುಪ್ಪಾ ತಹಸೀಲ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ನೂತನ ಚಿಟಗುಪ್ಪ ತಾಲೂಕು ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಲವು ದಶಕಗಳಿಂದ ಪಕ್ಷಾತೀತವಾಗಿ ನಡೆದ ಹೋರಾಟಕ್ಕೆ ಜಯ ಸಿಕ್ಕಿದೆ. ಹೋರಾಟಗಾರರು, ಸಚಿವರು, ಮುಖಂಡರ ಹೋರಾಟ ಮತ್ತು ಮುಖ್ಯಮಂತ್ರಿಯವರ ಪ್ರಗತಿಯ ಅಭಿಲಾಶೆಯಿಂದಾಗಿ ಹೊಸ ತಾಲೂಕು ರಚನೆಯಾಗಿದೆ. ಹೊಸ ತಾಲೂಕು ಕೇಂದ್ರದಲ್ಲಿ ಕಚೇರಿಗಳು ಎಲ್ಲಿರಬೇಕು ? ಶೀಘ್ರ ಕೈಗೊಳ್ಳಬೇಕಿರುವ ಪ್ರಗತಿ ಕೆಲಸಗಳನ್ನು ಆದ್ಯತೆಯ ಮೇರೆಗೆ ಆರಂಭಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಾಲೂಕು ರಚನೆಯಿಂದಾಗಿ ಇಲ್ಲಿನ ಜನತೆಗೆ ಹಲವು ಅವಕಾಶಗಳು ಸಿಗಲಿವೆ. ಸಾರ್ವಜನಿಕರು ಸೌಲಭ್ಯಗಳ ಸದುಪಯೋಗ ಪಡೆಯಬೇಕು ಎಂದರು.
ಹಲವು ಸ್ವಾತಂತ್ರ್ಯ ಸೇನಾನಿಗಳನ್ನು ನೀಡಿದ ಚಿಟಗುಪ್ಪಾ ತಾಲೂಕು ಹಲವು ವೈಶಿಷ್ಠ್ಯತೆಗಳಿಂದ ಕೂಡಿದೆ. ಎಲ್ಲಾ ಪ್ರಗತಿ ಕಾರ್ಯಗಳು ಮತ್ತು ಹೋರಾಟಗಳು ಪಕ್ಷ ಬೇಧಗಳಿಲ್ಲದೇ ನಡೆಯುತ್ತವೆ. ಈಗಾಗಲೇ ಸಾಕಷ್ಟು ಪ್ರಗತಿ ಕೆಲಸಗಳು ನಡೆದಿವೆ. ಇನ್ನಷ್ಟು ಪ್ರಗತಿ ಸಾಧಿಸಲು ಪ್ರಮಾಣಿಕವಾಗಿ ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಭಾರತಬಾಯಿ ಶೇರಿಕಾರ ಮಾತನಾಡಿ, ಹೊಸ ತಾಲೂಕು ರಚನೆಯಿಂದಾಗಿ ಇಲ್ಲಿನ ಜನತೆಗೆ ಹಲವು ಅವಕಾಶಗಳು ಸಿಗಲಿವೆ. ಉದ್ಯೋಗ ಸೃಷ್ಟಿ ಸೇರಿದಂತೆ ಸಾಕಷ್ಟು ಪ್ರಗತಿ ಸಾಧಿಸಲು ನೆರವಾಗಲಿವೆ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಡಾ.ಪ್ರಕಾಶ ಪಾಟೀಲ್ ಮಾತನಾಡಿ, ಚಿಟಗುಪ್ಪ ಐತಿಹಾಸಿಕ ನಗರವಾಗಿದೆ. ಸಮಾಜವಾದಕ್ಕೆ ಹೆಸರುವಾಸಿರುವ ಈ ಪ್ರದೇಶವು ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ಖ್ಯಾತಿ ಹೊಂದಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಪ್ರಗತಿ ಕಾಣಿಸಲಿದೆ ಎಂದು ತಿಳಿಸಿದರು.
ಹುಮನಾಬಾದ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ರಮೇಶ ಡಾಕುಳಗಿ, ಪುರಸಭೆ ಉಪಾಧ್ಯಕ್ಷರಾದ ಮಹಮ್ಮದ್ ಲೈಕೋದ್ದಿನ್, ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ್, ಮುಖಂಡರಾದ ಬಾಬ ಬುಖಾರಿ, ಸಂಗಣ್ಣ ಪಾರಾ ಮಾತನಾಡಿದರು.
ವೇದಿಕೆಯಲ್ಲಿ ಚಿಟಗುಪ್ಪ ಪುರಸಭೆ ಅಧ್ಯಕ್ಷರಾದ ಗೌರಮ್ಮ ಮಡೆಪ್ಪ ನರಸಾಳ, ಬಸವಕಲ್ಯಾಣ ಸಹಾಯಕ ಆಯುಕ್ತರಾದ ಶರಣಬಸಪ್ಪ ಕೋಟೆಪ್ಪಗೋಳ, ತಹಸೀಲ್ದಾರರಾದ ಡಿ.ಎಂ.ಪಾಣಿ, ಜನಪತ್ರಿನಿಧಿಗಳು, ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.