ಶಿಲ್ಲಾಂಗ್/ಕೊಹಿಮಾ, ಫೆ.27-ಈಶಾನ್ಯ ಭಾರತದ ಮೇಘಾಲಯ ಮತ್ತು ನಾಗಲ್ಯಾಂಡ್ ರಾಜ್ಯದಲ್ಲಿ ಇಂದು ಭಾರೀ ಭದ್ರತೆ ನಡುವೆ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಿತು. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದಂತೆ ಮತದಾನ ಶಾಂತಿಯುತವಾಗಿತ್ತು.
ಚಳಿಯನ್ನು ಲೆಕ್ಕಿಸದೇ ಮತದಾರರು ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದ ದೃಶ್ಯ ಕಂಡುಬಂದಿತು.
ಈ ಎರಡೂ ರಾಜ್ಯಗಳಲ್ಲೂ ತಲಾ 60 ವಿಧಾನಸಭಾ ಕ್ಷೇತ್ರಗಳಿವೆ. ಆದರೆ ತಲಾ 59 ಕ್ಷೇತ್ರಗಳಿಗೆ ಮಾತ್ರ ಇಂದು ಮತದಾನ ನಡೆಯಿತು.
ಎರಡೂ ರಾಜ್ಯಗಳಲ್ಲೂ ಉಗ್ರಗಾಮಿಗಳಿಂದ ಆತಂಕ ಇರುವ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು.
ಮೇಘಾಲಯದಲ್ಲಿ 370 ಅಭ್ಯರ್ಥಿಗಳು ಕಣದಲ್ಲಿದ್ದು, 18.4 ಲಕ್ಷ ಮತದಾರರು ಅವರ ಭವಿಷ್ಯ ನಿರ್ಧರಿಸಲಿದ್ಧಾರೆ. 37 ಮಹಿಳಾ ಉಮೇದುವಾರರೂ ಸ್ಪರ್ಧೆಯಲ್ಲಿದ್ದು, ರಾಜ್ಯದ ಇತಿಹಾಸದಲ್ಲೇ ಇದು ದಾಖಲೆಯಾಗಿದೆ.
ಮೇಘಾಲಯದಲ್ಲಿ ಎಲ್ಲಾ 59 ಕ್ಷೇತ್ರಗಳಲ್ಲೂ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ 47 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.
ಇದೇ ಮೊದಲ ಬಾರಿಗೆ ಮಹಿಳಾ ಮತದಾರರಿಗಾಗಿ 67 ಮತಗಟ್ಟೆಗಳನ್ನು ತೆರೆಯಲಾಗಿತ್ತು. 61 ಮಾದರಿ ಮತಕೇಂದ್ರಗಳನ್ನು ಸಹ ರೂಪಿಸಲಾಗಿತ್ತು.
ಫೆ.18ರಂದು ನಡೆದ ಬಾಂಬ್ ಸ್ಫೋಟದಲ್ಲಿ ಮೇಘಾಲಯದ ವಿಲಿಯಂನಗರ ಕ್ಷೇತ್ರದ ಎನ್ಸಿಪಿ ಅಭ್ಯರ್ಥಿ ಜೋನಾಥನ್ ಎನ್.ಸಂಗ್ಮಾ ಅವರು ಹತರಾದ ಕಾರಣ ಆ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಲಾಗಿದೆ.
ಮತದಾನದ ಮುನ್ನದಿನವಾದ ಸೋಮವಾರ ಮೇಘಾಲಯದ ಈಸ್ ಖಾಸಿ ಹಿಲ್ ಜಿಲ್ಲೆಯಲ್ಲಿ ಚುನಾವಣಾ ಅಧಿಕಾರಿಗಳು 38.67 ಲಕ್ಷ ರೂ.ನಗದನ್ನು ವಶಪಡಿಸಿಕೊಂಡಿದ್ದರು.
ನಾಗಾಲ್ಯಂಡ್ನ 40 ಕ್ಷೇತ್ರಗಳಲ್ಲಿ ಎನ್ಡಿಪಿಸಿ ಮತ್ತು 20 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಗಾಲ್ಯಾಂಡ್ನ ಉತ್ತರ ಅಂಗಾಮಿ-2 ಕ್ಷೇತ್ರದೀಂದ ಎನ್ಡಿಪಿಪಿ ಮುಖ್ಯಸ್ಥ ನೀಫಿಯು ರಿಯೋ ಅವಿರೋಧ ಆಯ್ಕೆಯಾಗಿದ್ದಾರೆ.
ನಾಗಾಲ್ಯಾಂಡ್ನಲ್ಲಿ 227 ಹುರಿಯಾಳುಗಳು ಕಣದಲ್ಲಿದ್ದು, 11.91 ಲಕ್ಷ ಮಂದಿ ತಮ್ಮ ಹಕ್ಕುಗಳನ್ನು ಚಲಾಯಿಸಲಿದ್ದಾರೆ. ಇಲ್ಲಿ ಮತದಾನಕ್ಕಾಗಿ 2.156 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಇವುಗಳಲ್ಲಿ 1,100ಗಳನ್ನು ಅತ್ಯಂತ ಸೂಕ್ಷ್ಮ, 530 ಮಟಗಟ್ಟೆಗಳನ್ನು ಸೂಕ್ಷ್ಮ ಮತ್ತು 526ಅನ್ನು ಸಾಮಾನ್ಯ ಎಂದು ಗುರುತಿಸಲಾಗಿದೆ.