ಹೆಚ್ಐವಿ/ಏಡ್ಸ್ ಪೀಡಿತರದಲ್ಲಿ ಆತ್ಮಸ್ಥೈರ್ಯ ಮೂಡಿಸಿ: ನ್ಯಾ.ಎಂ.ಎಸ್.ಪಾಟೀಲ್
ಬೀದರ, ಫೆ.27:- ಹೆಚ್ಐವಿ/ಏಡ್ಸ್ ಪೀಡಿತರನ್ನು ನಿರ್ಲಕ್ಷಿಸದೇ ದಯೆ ಮತ್ತು ಪ್ರೀತಿಯಿಂದ ನೋಡಿಕೊಳ್ಳಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎಸ್.ಪಾಟೀಲ್ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಲ್ಲಿ ಪ್ಯಾನಲ್ ವಕೀಲರಿಗೆ ಏರ್ಪಡಿಸಿದ್ದ ಹೆಚ್ಐವಿ/ಏಡ್ಸ್ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್ಐವಿ ಪೀಡಿತರು ಆತ್ಮಸ್ಥೆರ್ಯ ಮತ್ತು ಉತ್ತಮ ಆಹಾರ ಸೇವನೆಯಿಂದ ಸಾಮಾನ್ಯ ಜೀವನ ನಡೆಸಬಹುದಾಗಿದೆ. ಯಾವುದೇ ಕಾರಣಕ್ಕೂ ಈ ರೋಗಿಗಳ ಮನಸ್ಸು ನೋಯಿಸದೇ ಗೌರವದಿಂದ ನೋಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ವಕೀಲರು ತಮ್ಮ ಬಳಿಗೆ ಬರುವ ಕಕ್ಷಿದಾರರನ್ನು ಹೆಚ್ಐವಿಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಹೆಚ್ಐವಿ ರೋಗದ ಲಕ್ಷಣಗಳು, ಹರಡುವ ವಿಧಾನಗಳು ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಕೆ.ಎಚ್ಪಾಟೀಲ್ ಅವರು ಮಾತನಾಡಿ, ಹೆಚ್ಐವಿ ಮತ್ತು ಏಡ್ಸ್ ನಿಯಂತ್ರಣಕ್ಕಾಗಿ ಜಿಲ್ಲಾ ವಕೀಲರ ಸಂಘ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಇನ್ನಷ್ಟು ಪ್ರಚಾರ ಮಾಡುವ ಅಗತ್ಯವಿದೆ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ದೀಪಾ ಖಂಡ್ರೆ ಮಾತನಾಡಿ, ಹೆಚ್ಐವಿ/ಏಡ್ಸ್ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯಿಂದ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪರಿಣಾಮವಾಗಿ ಜನರಲ್ಲಿ ತಿಳುವಳಿಕೆ ಮೂಡುತ್ತಿದ್ದು, ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೆಚ್ಐವಿ/ಏಡ್ಸ್ ವೈರಸ್ನಿಂದ ಹರಡುವ ರೋಗವಾಗಿದ್ದು, ಇದು ಕೈ ಕಲುಕುವುದು, ಒಟ್ಟಿಗೆ ಊಟ ಮಾಡುವುದರಿಂದ ಬರದೇ ಪರೀಕ್ಷಿಸದೇ ರಕ್ತದ ವರ್ಗಾವಣೆ ಮಾಡುವುದು, ಸಂಸ್ಕರಿಸದ ಸೂಜಿಯ ಬಳಕೆ, ತಾಯಿಯಿಂದ ಮಗುವಿಗೆ ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ. ರೋಗ ಪತ್ತೆಯಾದಲ್ಲಿ ಕೂಡಲೇ ಚಿಕಿತ್ಸೆ ಆರಂಭಿಸಬೇಕು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ನಂಜುಂಡಯ್ಯಾ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ರಾಘವೇಂದ್ರ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಬಿರಾದಾರ, ವಕೀಲರು ಹಾಗೂ ಕುಟುಂಬ ಕಲ್ಯಾಣ ಸಮಿತಿಯ ಸದಸ್ಯರಾದ ಬಿ.ಎಸ್.ಪಾಟೀಲ್, ಆರೋಗ್ಯ ಇಲಾಖೆಯ ಸೂರ್ಯಕಾಂತ, ಪ್ಯಾನೆಲ್ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.