ಬೆಂಗಳೂರು, ಫೆ.27- ಎಲ್ಲಾದರೂ ಇರು ಎಂಥಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು… ಎಂಬ ರಾಷ್ಟ್ರಕವಿ ಕುವೆಂಪು ಅವರ ಆದರ್ಶಪೂರ್ವ ಕವಿತೆಯಂತೆ ಸಪ್ತಸಾಗರದಾಚಿನ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಕೂಟ ಅಕ್ಕ ಸಂಘಟನೆ ವಿಶ್ವಕನ್ನಡ ಸಮ್ಮೇಳನಕ್ಕೆ ಅದ್ಧೂರಿ ಸಿದ್ದತೆಯನ್ನು ಆರಂಭಿಸಿದೆ.
ದಶಮಾನೋತ್ಸವ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಕನ್ನಡಿಗರ ಹಿರಿಮೆ, ಕಲೆ, ಸಾಹಿತ್ಯ, ಸಾಂಸ್ಕøತಿಕ ಜತೆಗೆ ಗ್ರಾಮೀಣ ಸೊಗಡು ಮತ್ತು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ನಿರ್ಧರಿಸಲಾಗಿದೆ.
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಅಕ್ಕ ಸಮ್ಮೇಳನಕ್ಕೆ ಈ ಬಾರಿ ಹೊಸ ಧ್ಯೇಯ ವಾಕ್ಯವನ್ನು ಕೂಡ ರೂಪಿಸಲಾಗಿದ್ದು, “ಅಕ್ಕರೆಯ ಹತ್ತರ ಸಾರ್ಥಕ ಹೊತ್ತು” ಎಂಬ ಘೋಷ ವಾಕ್ಯದಡಿ ಕನ್ನಡ ಹಬ್ಬವನ್ನು ಆಚರಿಸಲಾಗುತ್ತಿದೆ.
ಅಮೆರಿಕದ ಮಾಹಿತಿ ತಂತ್ರಜ್ಞಾನದ ಕೇಂದ್ರವೆಂದೇ ಗುರುತಿಸಿಕೊಂಡಿರುವ ಹಲವು ಐತಿಹಾಸಿಕ ತಾಣಗಳ ಟೆಕ್ಸಾಸ್ನ ಡಲ್ಲಾಸ್ ನಗರದಲ್ಲಿ ಈ ಬಾರಿ 10ನೇ ವಿಶ್ವ ಅಕ್ಕ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಕ್ಕ ಸಂಘಟನೆ ಅಧ್ಯಕ್ಷ ಶಿವಮೂರ್ತಿ ಕೀಲಾರ ತಿಳಿಸಿದ್ದಾರೆ.
ಅಕ್ಕ ಸಂಘಟನೆ ಪ್ರಾರಂಭಗೊಂಡು 20 ವರ್ಷ ಪೂರೈಸುತ್ತಿದೆ. ಇದೊಂದು ನಮಗೆ ಹೆಮ್ಮೆಯ ಸಂಗತಿ. ಇದಲ್ಲದೆ 10ನೆ ಸಮ್ಮೇಳನ ಬಂದಿರುವುದು ಕೂಡ ನಮ್ಮೆಲ್ಲರನ್ನು ಪುಳಕಗೊಳ್ಳುವಂತೆ ಮಾಡಿದೆ. ನಮ್ಮ ಸಂಘಟನೆ ಅಮೆರಿಕದ ವಿವಿಧೆಡೆ ನೆಲೆಸಿರುವ ಎಲ್ಲ ಕನ್ನಡ ಸಂಘಗಳನ್ನು ಸಂಪರ್ಕಿಸಲಾಗಿದ್ದು, ಅವರೂ ಕೂಡ ಉತ್ಸಾಹದಲ್ಲಿದ್ದಾರೆ ಎಂದರು.
ವಿಶೇಷವಾಗಿ ಈ ಬಾರಿ ಮುಖ್ಯ ಅತಿಥಿಗಳಾಗಿ ಭಾರತ ರತ್ನ, ಖ್ಯಾತ ವಿಜ್ಞಾನಿ ಸಿ.ಎನ್.ಆರ್.ರಾವ್ ಅವರನ್ನು ಆಹ್ವಾನಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಹಲವು ಸಚಿವರು, ಶಾಸಕರು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಅಕ್ಕರೆಯ ಕರೆಯೋಲೆಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಡಲ್ಲಾಸ್ ನಗರದ ಶೆರಟನ್ ಕನ್ವೆನ್ಷನ್ ಸೆಂಟರ್ನಲ್ಲಿ (ಆ.31ರಿಂದ ಸೆ.2ರವರೆಗೆ) ಮೂರು ದಿನಗಳ ಕಾಲ ಸಮ್ಮೇಳನ ನಡೆಯಲಿದ್ದು, ಇಲ್ಲಿ ಕಲೆ, ಸಾಹಿತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕರ್ನಾಟಕದಿಂದ ಕಲಾ ತಂಡಗಳು ಹಾಗೂ ದೇಶದ ವಿವಿಧೆಡೆಗಳಿಂದ ಪ್ರತಿನಿಧಿಗಳು ಕೂಡ ಆಗಮಿಸುತ್ತಿದ್ದಾರೆ. ಅಕ್ಕ ಸಂಘಟನೆಯ ಛೇರ್ಮನ್ ಅಮರ್ನಾಥ್ಗೌಡ, ಮಾಜಿ ಅಧ್ಯಕ್ಷ ಡಾ.ವಿಶ್ವಾಮಿತ್ರ ಅವರ ಮಾರ್ಗದರ್ಶನದಲ್ಲಿ ಭರದ ತಯಾರಿ ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಸವಿವರದ ಮಾಹಿತಿಯನ್ನು ನೀಡಲಾಗುವುದು ಎಂದು ಶಿವಮೂರ್ತಿ ಅವರು ತಿಳಿಸಿದ್ದಾರೆ.
ಭಾರತ ಗ್ರಾಮೀಣ ಪ್ರಧಾನವಾದ ದೇಶ. ಇಲ್ಲಿನ ಅನ್ನದಾತರನ್ನು ನೆನೆದು ಸಂಸ್ಕøತಿಯನ್ನು ವಿದೇಶದಲ್ಲಿ ಪಸರಿಸಿ ಮತ್ತು ಇಲ್ಲಿರುವ ಕನ್ನಡಿಗರನ್ನು ಸಂಘಟಿಸುವ ಅಭೂತಪೂರ್ವ ಕಾರ್ಯಕ್ರಮದ ಇದಾಗಲಿದೆ ಎಂದು ಹೇಳಿದ್ದಾರೆ.