ಬೆಂಗಳೂರು: ಕಾನೂನು ಸುವ್ಯವಸ್ಥೆ ಸೇರಿದಂತೆ, ನಗರದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಬೆಂಗಳೂರು ರಕ್ಷಿಸಿ ಅಭಿಯಾನ ನಡೆಸಲು ತೀರ್ಮಾನಿಸಿದೆ.
ಮಾರ್ಚ್ 2 ರಿಂದ 15ರವರೆಗೂ ಬೆಂಗಳೂರು ರಕ್ಷಿಸಿ ಅಭಿಯಾನದಡಿ ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪಾದಯಾತ್ರೆ ನಡೆಯಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಆರ್. ಅಶೋಕ್ ಹೇಳಿದರು.
ಬೆಂಗಳೂರು ನಗರದ ಬಿಜೆಪಿ ಶಾಸಕರ ಜೊತೆ ಇಂದು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ರಕ್ಷಿಸಿ ಅಭಿಯಾನದ ಬಗ್ಗೆ ವಿವರ ನೀಡಿದ ಅವರು, ಉದ್ಯಾನನಗರಿ ಇಂದು ಕ್ರೈಂ ಸಿಟಿಯಾಗಿದೆ. ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ದೂರಿ ಕುಸಿದಿರುವ ಕಾನೂನು ಸುವ್ಯವಸ್ಥೆ ಸೇರಿದಂತೆ, ನಗರದ 5 ಪ್ರಮುಖ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರು ರಕ್ಷಿಸಿ ಅಭಿಯಾನ ನಡೆಯಲಿದೆ ಎಂದರು.
ರಾಜ್ಯ ಸರ್ಕಾರದ ಕಳಪೆ ಮೂಲ ಸೌಕರ್ಯ, ಕಸದ ಸಮಸ್ಯೆ, ಕೆರೆ ಸಮಸ್ಯೆ ಸೇರಿದಂತೆ, ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಈ ಅಭಿಯಾನವನ್ನು ನಡೆಸಲಾಗುತ್ತಿದ್ದು, ಕಾಂಗ್ರೆಸ್ ದುರಾಡಳಿತದಿಂದ ಬೆಂಗಳೂರನ್ನು ರಕ್ಷಿಸುವುದು ಇದರ ಉದ್ದೇಶ ಎಂದರು.
ಬರುವ ಮಾರ್ಚ್ 2 ರಂದು ಬಸವನಗುಡಿಯಲ್ಲಿ ಈ ಅಭಿಯನಕ್ಕೆ ಚಾಲನೆ ನೀಡಲಾಗುತ್ತಿದ್ದು, ಪ್ರತಿದಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರ ಪಾದಯಾತ್ರೆ ನಡೆಯಲಿದೆ. ಈ ಪಾದಯಾತ್ರೆಯಲ್ಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದ ಗೌಡ, ಸಂಸದ ಪಿ.ಸಿ. ಮೋಹನ್ ಸೇರಿದಂತೆ, ಎಲ್ಲಾ ಪ್ರಮುಖ ಮುಖಂಡರುಗಳು ಪಾಲ್ಗೊಳ್ಳುವರು ಎಂದರು.
ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.