ಬೆಂಗಳೂರು, ಫೆ.26- ನಗರದಲ್ಲಿ ಆಗಿಂದಾಗ್ಗೆ ಮನೆಗಳ್ಳತನ ಪ್ರಕರಣಗಳು ನಡೆಯುತ್ತಲೇ ಇದ್ದು, ಹಾಡಹಗಲೇ ಕಳ್ಳರು ಮನೆಯೊಂದರ ಬೀಗ ಒಡೆದು ಒಳನುಗ್ಗಿ 2.35 ಲಕ್ಷ ರೂ. ಹಣ ಹಾಗೂ 214 ಗ್ರಾಣ ಆಭರಣವನ್ನು ಕದ್ದೊಯ್ದಿರುವ ಘಟನೆ ಅನ್ನಪೂರ್ಣೇಶ್ವರಿನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಾಗರಬಾವಿ, 7ನೇ ಬ್ಲಾಕ್, 3ನೇ ಕ್ರಾಸ್ ನಿವಾಸಿ ಪಾಪಯ್ಯ ಎಂಬುವರು ನಿನ್ನೆ ಮಧ್ಯಾಹ್ನ 1.45ರಲ್ಲಿ ಅನ್ಯ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಈ ವೇಳೆ ಕಳ್ಳರು ಇವರ ಮನೆಯ ಬೀಗ ಒಡೆದು ಒಳನುಗ್ಗಿ ಬೀರುವನ್ನು ಮೀಟಿ 2.35 ಲಕ್ಷ ರೂ. ಹಣ ಹಾಗೂ 214 ಗ್ರಾಂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.
ರಾತ್ರಿ ಪಾಪಯ್ಯ ಮನೆಗೆ ವಾಪಾಸಾದಾಗ ಮನೆಯ ಬೀಗ ಒಡೆದಿರುವುದು ಗಮನಿಸಿ ತಕ್ಷಣ ಬೆಳಗ್ಗೆ ಹೋಗಿ ನೋಡಲಾಗಿ ಬೀರುವಿನಲ್ಲಿದ್ದ ಹಣ, ಆಭರಣ ಕಳ್ಳತನವಾಗಿರುವುದು ಕಂಡು ಬಂದಿದೆ.
ತಕ್ಷಣ ಅನ್ನಪೂರ್ಣೇಶ್ವರಿನಗರ ಪೊಲೀಸರಿಗೆ ತಿಳಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.