ನವದೆಹಲಿ:ಫೆ-26: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ಸ್ವದೇಶಿ ನಿರ್ಮಿತ ರುಸ್ತುಂ-2 ಡ್ರೋನ್ನ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.
ಕರ್ನಾಟಕದ ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ನಲ್ಲಿ ರುಸ್ತುಂ-2 ಡ್ರೋನ್ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ಡಿಆರ್ಡಿಒ ಮುಖ್ಯಸ್ಥ ಎಸ್. ಕ್ರಿಸ್ಟೋಫರ್, ಏರೋನಾಟಿಕಲ್ ವ್ಯವಸ್ಥೆಯ ಪ್ರಧಾನ ನಿರ್ದೇಶಕ ಸಿ.ಪಿ.ರಾಮನಾರಾಯಣನ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಸಿಸ್ಟಮ್ಸ್ ಪ್ರಧಾನ ನಿರ್ದೇಶಕಿ ಜೆ. ಮಂಜುಳಾ, ಹಿರಿಯ ವಿಜ್ಞಾನಿಗಳ ಸಮ್ಮುಖದಲ್ಲಿ ಈ ಪರೀಕ್ಷೆ ನಡೆದಿದ್ದು, ರಸ್ತುಂ ತಂಡವನ್ನು ಎಲ್ಲರೂ ಅಭಿನಂದಿಸಿದರು.
ಅಮೆರಿಕದ ಪ್ರಿಡೇಟರ್ ಡ್ರೋನ್ ಮಾದರಿಯಲ್ಲೇ ಭಾರತದಲ್ಲಿ ಮಾನವರಹಿತ ಡ್ರೋನ್ ರುಸ್ತುಂ 2 ಅಥವಾ ತಪಸ್-ಬಿಎಚ್-201 ಅನ್ನು ಅಭಿವೃದ್ಧಿಪಡಿಸಲಾಗಿದೆ. 7 ವರ್ಷಗಳ ಹಿಂದೆ ಅಂದರೆ 2009ರ ನವೆಂಬರ್ 16ರಂದು ಹೊಸೂರಿನ ತನೇಜಾ ಏರೋಸ್ಪೇಸ್ ಏರ್ಫೀಲ್ಡ್ ನಲ್ಲಿ ರುಸ್ತುಂ-1ರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು.
ಸತತ 24 ಗಂಟೆಗಳವರೆಗೆ ಹಾರುವ ಸಾಮರ್ಥ್ಯವಿರುವ ಈ ಡ್ರೋನ್ ಅನ್ನು ಯುದ್ಧದ ಸಂದರ್ಭದಲ್ಲಿ ಬಳಸಬಹುದಾಗಿದೆ. ಇದು ಸುಸ್ಥಿರ ನಿಗಾ ವ್ಯವಸ್ಥೆಯಾಗಿಯೂ ಕಾರ್ಯನಿರ್ವಹಿಸಲಿದ್ದು, ನಿಗಾ ಸಲಕರಣೆಗಳ ಜೊತೆಗೆ ಶಸ್ತ್ರಾಸ್ತ್ರಗಳನ್ನು ಹೊತ್ತೂಯ್ಯುವ ಸಾಮರ್ಥ್ಯವನ್ನೂ ಹೊಂದಿದೆ. ಸಿಂಥೆಟಿಕ್ ಅಪರ್ಚರ್ ರೇಡಾರ್, ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಸಿಸ್ಟಮ್ಸ್, ಸಿಚುವೇಷನಲ್ ಅವೇರ್ನೆಸ್ ಪೇಲೋಡ್ಗಳನ್ನು ಈ ಡ್ರೋನ್ ಹೊತ್ತೂಯ್ಯಬಲ್ಲದು. ಭೂಸೇನೆ, ನೌಕಾ ಮತ್ತು ವಾಯುಪಡೆಯ ಅಗತ್ಯತೆಗೆ ಅನುಗುಣವಾಗಿ 1,500 ಕೋಟಿ ರೂ. ವೆಚ್ಚದಲ್ಲಿ ಈ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗಿದೆ ಎಂದು ಹಿರಿಯ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.