ನಂಜನಗೂಡು,ಫೆ.26- ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದರ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕಾರಣಕರ್ತರಾದ ಜನತೆಗೆ ತಾನು ಸದಾ ಋಣಿ ಎಂದು ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇಪ್ಪ ಹೇಳಿದರು.
ಅಲ್ಲಯ್ಯನಪುರದಲ್ಲಿ ಹರದನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ತಾಲ್ಲೂಕಿನ ಗಡಿಯಂಚಿನ ಗ್ರಾಮಗಳಾದ ಅಲ್ಲಯ್ಯನಪುರ, ಟಿ.ಕಾಟೂರು, ಬಸಾಪುರ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಮತ್ತು ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಉಪ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿ.ಶ್ರೀನಿವಾಸ್ ಪ್ರಸಾದ್, ಚುನಾವಣೆಯನ್ನು ಸವಾಲಾಗಿ ಸ್ಪೀಕರಿಸಿ, ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತರೂ ತಾವುಗಳಲೆಲ್ಲಾ ಅದಕ್ಕೆ ಆಸ್ಪದ ನೀಡದೇ ಪಕ್ಷ,ಜಾತಿ, ನೋಡದೇ ಒಗ್ಗಟ್ಟಿನಿಂದ ಅಭಿವೃದ್ದಿ ಕೆಲಸಗಳನ್ನು ನೋಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡಿದ್ದೀರಿ ಎಂದರು.
ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಲು ಸಿದ್ದವಾಗಿದ್ದು, ಅದಕ್ಕೆ ಮಾಧ್ಯಮಗಳ ಸಮೀಕ್ಷೆಯೂ ನಮ್ಮ ಪಕ್ಷದ ಪರವಾಗಿ ಭವಿಷ್ಯ ನುಡಿದಿದೆ ಎಂದರು.
ಎಸ್ಇಪಿ/ಟಿಎಸ್ಪಿ ಅನುಧಾನದಲ್ಲಿ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ವರ್ಗದ ಬೀದಿಗಳು ಕಾಂಕ್ರೀಟ್ ಭಾಗ್ಯ ಕಂಡಿದೆ. 40 ಕೋಟಿ ಹಣವನ್ನು ಮಂಜೂರು ಮಾಡಿದರೆ ಸಾಮಾನ್ಯ ವರ್ಗದ ಬೀದಿಗಳು ಸಹ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತನೆಯಾಗಲಿದೆ. ಅಲ್ಲಯ್ಯನಪುರ,ಕಾಟೂರು, ಚಂದ್ರವಾಡಿ, ಮಾರ್ಗದ ರಸ್ತೆ 6 ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಶೀಘ್ರದಲ್ಲೆ ಆರಂಭಗೊಳ್ಳಲಿದೆ ಎಂದರು.
ಶಾಸಕ ಕಳಲೆ ಎನ್.ಕೇಶವಮೂರ್ತಿ ಮಾತನಾಡಿ, ಸಚಿವ ಹೆಚ್.ಸಿ.ಮಹದೇವಪ್ಪನವರ ಸಹಕಾರ ಇಲ್ಲದಿದ್ದರೆ ಕ್ಷೇತ್ರದಲ್ಲಿ ಈ ಮಟ್ಟದ ಕೆಲಸ ಸಾಧ್ಯವಾಗುತ್ತಿರಲಿಲ್ಲ. ಅಲ್ಪಾವಧಿಯಲ್ಲಿ ಕುಡಿಯುವ ನೀರು, ನೀರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆ, ರಸ್ತೆ ಅಭಿವೃದ್ದಿಗೆ ಹಣ ನೀಡಿರುವುದಕ್ಕೆ ಕ್ಷೇತ್ರದ ಜನತೆ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.
ವಿಶ್ವಕರ್ಮ ನಿಗಮ ಮಂಡಳಿ ಅಧ್ಯಕ್ಷ ಎನ್.ನಂದಕುಮಾರ್, ಇಂದನ್ ಬಾಬು, ಮಾಜಿ ತಾ.ಪಂ,ಅಧ್ಯಕ್ಷ ಚಾಮರಾಜು, ಶಟ್ಟಹಳ್ಳಿ ಗುರುಸ್ವಾಮಿ, ಚಂದ್ರವಾಡಿ ನಾಗಣ್ಣ, ದೇವನೂರು ಬುಲೆಟ್ ಮಹದೇವಪ್ಪ, ಬಿ.ಎಸ್, ಗುರುಸಿದ್ದಪ್ಪ, ಹರದನಹಳ್ಳಿ ನಂಜುಂಡಸ್ವಾಮಿ, ಸೊಮೇಶ್, ಗ್ರಾಪಂ ಸದಸ್ಯ ಐ.ಟಿ.ಮಂಜು, ಲೋಕೋಪಯೋಗಿ ಇಲಾಖೆಯ ಅಭಿಯಂತರಾದ ರವಿಕುಮಾರ್, ತಹಸೀಲ್ಧಾರ್ ಎಂ.ದಯಾನಂದ, ಕಾವೇರಿ ನೀರಾವರಿ ನಿಗಮದ ಅಭಿಯಂತರ ಮರಿಸ್ವಾಮಿ ಮುಂತಾದವರು ಇದ್ದರು.