ಮೈಸೂರು, ಫೆ.26-ಯಾವುದೇ ಕಾರಣಕ್ಕೂ ನಾನು ರಾಜಕೀಯಕ್ಕೆ ಬರುವುದಿಲ್ಲ. ಬಿಜೆಪಿಗೆ ವೋಟು ಹಾಕಬೇಡಿ ಅಥವಾ ಕಾಂಗ್ರೆಸ್ಗೆ ವೋಟು ಹಾಕಿ ಎಂದು ಯಾವ ಪಕ್ಷದ ಪರವಾಗಿಯೂ ನಾನು ಮಾತನಾಡುವುದಿಲ್ಲ ಎಂದು ನಟ ಪ್ರಕಾಶ್ ರೈ ಇಂದಿಲ್ಲಿ ಸ್ಪಷ್ಟಪಡಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಜನರಲ್ಲಿ ಪ್ರಶ್ನೆ ಕೇಳುವ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಲು ಮಾತ್ರ ಜಸ್ಟ್ ಆಸ್ಕಿಂಗ್ ಎಂಬ ಅಭಿಮಾನ ಆರಂಭಿಸಿದ್ದೇನೆ. ಅದರ ಅಂಗವಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ಆದರೆ ಯಾರೂ ನನ್ನ ಪ್ರಶ್ನೆಗೆ ಉತ್ತರಿಸದೆ ಪ್ರತಿ ಪ್ರಶ್ನೆಯನ್ನೇ ಕೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಇರುವ ಸಮಸ್ಯೆಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳುತ್ತಿಲ್ಲ. ಇದು ಸರಿಯಲ್ಲ. ಇದರ ಮಧ್ಯೆ ನನ್ನ ವೈಯಕ್ತಿಕ ವಿಷಯವನ್ನು ತರುತ್ತಿದ್ದಾರೆ. ಇದು ನಾನು ಕೇಳಿದ ಪ್ರಶ್ನೆಗೆ ಉತ್ತರವಲ್ಲ ಎಂದು ಹೇಳಿದರು.
ನಾನು ಸಾಮಾನ್ಯ ಜನರ ಪರವಾಗಿದ್ದೇನೆ. ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯು ಪ್ರಶ್ನೆ ಕೇಳುವಂತಾಗಬೇಕು. ಅವರ ದನಿಯಾಗಿ ನಾನು ಅಭಿಯಾನ ನಡೆಸುತ್ತಿದ್ದೇನೆ ಎಂದು ವಿವರಿಸಿದರು.
ಜಸ್ಟ್ ಆಸ್ಕಿಂಗ್ ಅಭಿಯಾನದ ಬಗ್ಗೆ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಪತ್ರಕರ್ತರನ್ನು ಭೇಟಿ ಮಾಡಿ ಮಾಹಿತಿ ನೀಡುತ್ತಿದ್ದೇನೆ. ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಮೈಸೂರಿನಲ್ಲಿ ಅಭಿಯಾನದ ವಿಚಾರವನ್ನು ತಿಳಿಸುತ್ತಿದ್ದೇನೆ. ಅದೇ ರೀತಿ ಎಲ್ಲ ಜಿಲ್ಲೆಗಳಲ್ಲೂ ಪ್ರಶ್ನೆ ಕೇಳುವ ಸರದಿ ಮುಂದುವರೆದಿದೆ ಎಂದರು.
ಯಾವುದೇ ಗುರಿಯಿಟ್ಟುಕೊಂಡು ಈ ಅಭಿಯಾನ ಮಾಡುತ್ತಿಲ್ಲ. ಆದರೆ ಪತ್ರಕರ್ತರೊಂದಿಗೆ ಮಾತನಾಡಬೇಕು. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಬೇಕಾಗಿದೆ. ನಾವು ಕೇಳುವ ಪ್ರಶ್ನೆಗಳಿಗೆ ಪ್ರತಿ ಪ್ರಶ್ನೆ ಕೇಳುವುದೇ ಉತ್ತರವಿಲ್ಲ ಎಂದು ಹೇಳಿದರು.
ಗೌರಿ ಲಂಕೇಶ್ ಹತ್ಯೆ ಕುರಿತಂತೆ ಯಾರೂ ಹತ್ಯೆ ಮಾಡಿದರು ಎಂದು ನಾನು ಕೇಳಲಿಲ್ಲ. ಬದಲಿಗೆ ಗೌರಿ ಲಂಕೇಶ್ ಹತ್ಯೆಯನ್ನು ನಿಮ್ಮ ಪಕ್ಷದ ಕಡೆಯವರು ಸಂಭ್ರಮಿಸುತ್ತಿದ್ದಾರೆ. ಆ ರೀತಿ ಮಾಡಬೇಡಿ ಎಂದು ಮೋದಿಯವರಿಗೆ ಹೇಳಿದ್ದೆ. ಅವರ ಕಡೆಯವರು ಮಾಡಿದ್ದರೇ ಎಂದು ಕೇಳಲಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾವೇರಿ ಜಲವಿವಾದದ ಕುರಿತಂತೆ ನಡೆದ ಸಂದರ್ಶನವೊಂದರಲ್ಲಿ ಎದ್ದು ಹೋದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರೈ, ಕಾವೇರಿ ವಿವಾದ ಒಂದು ಸೂಕ್ಷ್ಮ ವಿಚಾರ. ಅದನ್ನು ಅಂದಿನ ಸಂದರ್ಶನದಲ್ಲಿ ಆ್ಯಂಕರ್ ಒಂದು ನಿಮಿಷದಲ್ಲಿ ಉತ್ತರ ಕೊಡುವಂತೆ ಹೇಳಿದ್ದರು.
ನಾನು ಒಂದು ನಿಮಿಷದಲ್ಲಿ ಉತ್ತರ ಕೊಡಲಾಗುವುದಿಲ್ಲ ಎಂದು ಹೇಳಿದ್ದೆ. ಹಾಗಾಗಿ ಅಲ್ಲಿಂದ ಎದ್ದು ಹೋದೆ. ಕಾವೇರಿ ವಿಚಾರವನ್ನು ಮಾತನಾಡಬಾರದೆಂದಲ್ಲ. ಅದನ್ನು ಸವಿಸ್ತಾರವಾಗಿ ಮಾತನಾಡಬೇಕು. ಈ ಕುರಿತಂತೆ ಪುಸ್ತಕವೊಂದನ್ನು ಬರೆದಿದ್ದೇನೆ. ಅದು ಪ್ರಕಟಗೊಳ್ಳುತ್ತಿಲ್ಲ ಎಂದು ತಿಳಿಸಿದರು.
ಮೋದಿ ಅವರ ಒಳ್ಳೆಯ ಗುಣಗಳು, ಸಿದ್ದರಾಮಯ್ಯನವರ ಸರ್ಕಾರದಲ್ಲಿ ಆಗಿರುವ ಕೆಟ್ಟ ಬೆಳವಣಿಗೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಮೋದಿಯವರು ಒಳ್ಳೆ ಕೆಲಸ ಮಾಡಿಲ್ಲ ಎಂದಲ್ಲ. ಮೋದಿ ಸ್ವಚ್ಛ ಭಾರತ ಯೋಜನೆಯನ್ನು ಜಾರಿಗೆ ತಂದಿರುವುದು ಒಳ್ಳೆಯದೇ. ಆದರೆ ಅದರಲ್ಲಿ ಕೆಲವೊಂದು ಲೋಪದೋಷಗಳಿವೆ. ಜಿಎಸ್ಟಿಯನ್ನು ತಂದಿದ್ದಾರೆ. ಅದು ಸಹ ಒಳ್ಳೆಯ ಕೆಲಸವೇ. ಆದರೆ ಬಡ ಕೈಮಗ್ಗ ವರ್ಗದವರಿಗೆ 18ರಷ್ಟು ಜಿಎಸ್ಟಿ ವಿಧಿಸಿರುವುದು ಸರಿಯಲ್ಲ. ಸಣ್ಣ ಮತ್ತು ಗುಡಿಕೈಗಾರಿಕೆಗಳಿಗೆ ಹೆಚ್ಚಿನ ಜಿಎಸ್ಟಿ ವಿಧಿಸಿ ಅವರನ್ನು ಸಂಪೂರ್ಣವಾಗಿ ತುಳಿಯುವ ಯತ್ನ ನಡೆಯುತ್ತಿದೆ.ಇದನ್ನು ನಾನು ಹೇಳುತ್ತಿದ್ದೇನೆ ಹೊರತು ಇದಕ್ಕೆ ಬೇರೆ ಅರ್ಥವನ್ನು ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪ್ರಶ್ನೆ ಕೇಳುತ್ತೇನೆ. ಇನ್ನು ಅದಕ್ಕೆ ಸಮಯ ಬಂದಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ರಾಜ್ಯದಲ್ಲಿರುವ ನೀರಿನ ಸಮಸ್ಯೆಯನ್ನು ಎಲ್ಲ ಪಕ್ಷಗಳು ವೋಟ್ ಬ್ಯಾಂಕ್ಗಳಾಗಿ ಮಾಡಿಕೊಂಡಿವೆ. ಯಾರೂ ಸಮಸ್ಯೆಯನ್ನು ಬಗೆಹರಿಸಲು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.