ಮೈಸೂರು, ಫೆ.26-ಗೊತ್ತು ಗುರಿ ಇಲ್ಲದೆ ನನ್ನ ಮೇಲೆ ಕ್ರಮಕೈಗೊಳ್ಳಲಾಗಿದೆ. ಈ ವಿಚಾರವೂ ತಮಗೆ ತಿಳಿದಿಲ್ಲ. ಯಾವುದೇ ಮಾಹಿತಿಯೂ ಇಲ್ಲ ಎಂದು ಮೇಯರ್ ಭಾಗ್ಯವತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘಿಸಿ ಭಾಗ್ಯವತಿ ಬಿಜೆಪಿ ಮತ್ತು ಜೆಡಿಎಸ್ಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮೇಯರ್ ಚುನಾವಣೆ ಸಂದರ್ಭದಲ್ಲಿ ಪಕ್ಷದಿಂದ ವಿಪ್ ಜಾರಿ ಮಾಡಿರಲಿಲ್ಲ, ಅಲ್ಲದೆ, ಪಕ್ಷದಿಂದ ಉಚ್ಚಾಟನೆ ಮಾಡುವ ಮೊದಲು ಶೋಕಾಸ್ ನೋಟೀಸ್ ನೀಡಬೇಕು. ಇದ್ಯಾವುದನ್ನೂ ನೀಡದೆ ಉಚ್ಚಾಟನೆ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಇದು ನೀತಿ, ನಿಯಮ ಬಾಹಿರವಾಗಿದ್ದು, ಪ್ರಜಾಪ್ರಭುತ್ವದ ಆಶಯದಂತೆ ನಡೆದುಕೊಳ್ಳಲಿದ್ದೇನೆ. ಈವರೆಗೂ ನನಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ನಿನ್ನೆಯಷ್ಟೆ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಬಿಜೆಪಿ ಮತ್ತು ಜೆಡಿಎಸ್ಗೆ ಸಹಕರಿಸುವ ಮೂಲಕ ಮೇಯರ್ ಆಗಿದ್ದ ಭಾಗ್ಯವತಿ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ ಎಂದು ತಿಳಿಸಿದ್ದರು.
ಪಕ್ಷದ ವರಿಷ್ಠರಂತೆ ಈ ಕ್ರಮಕೈಗೊಳ್ಳಲಾಗಿದೆ. ಪ್ರಾಥಮಿಕ ಸದಸ್ಯತ್ವದಿಂದ ಅವರನ್ನು ಉಚ್ಚಾಟಿಸಲಾಗಿದೆ. ಜ.24ರಂದು ನಡೆದ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿ ಕಮಲಾ ವಿರುದ್ಧ ಪಕ್ಷದ ವಿಪ್ ಉಲ್ಲಂಘಿಸಿ ಜೆಡಿಎಸ್ ಪಾಲಿಕೆ ಸದಸ್ಯರ ಬೆಂಬಲದೊಂದಿಗೆ ಬಂಡಾಯವಾಗಿ ಸ್ಪರ್ಧಿಸಿದ್ದರು. ಹೀಗಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಭಾಗ್ಯವತಿ ಸ್ಪಷ್ಟನೆ ನೀಡಿದ್ದಾರೆ.