ಬೆಂಗಳೂರು, ಫೆ.26- ರಾಜ್ಯ ವಿಧಾನಸಭೆ ಚುನಾವಣೆಗೆ ಸಕಲ ತಯಾರಿಗಳನ್ನು ಆರಂಭಿಸಿರುವ ಚುನಾವಣಾ ಆಯೋಗ ನಾಳೆಯಿಂದ ಮತಯಂತ್ರಗಳ ಪರಿಶೀಲನಾ ಕಾರ್ಯವನ್ನು ಆರಂಭಿಸಲಿದೆ.
ರಾಜ್ಯಕ್ಕೆ ಅಗತ್ಯವಿರುವ ಮತಯಂತ್ರಗಳನ್ನು ಬೇರೆ ಬೇರೆ ರಾಜ್ಯಗಳಿಂದ ತರಿಸಿಕೊಳ್ಳಲಾಗುತ್ತಿದ್ದು, ಈಗಾಗಲೇ ಗುಜರಾತ್, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತಿತರ ರಾಜ್ಯಗಳಿಂದ ಮತ ಯಂತ್ರಗಳನ್ನು ಬೇರೆ ಬೇರೆ ಜಿಲ್ಲೆಗಳಿಗೆ ರವಾನಿಸಲಾಗಿದೆ.
ಇಂದು ಬೆಂಗಳೂರು ನಗರ ಜಿಲ್ಲೆಯ ಮಹದೇವಪುರ, ದಾಸರಹಳ್ಳಿ, ಬೆಂಗಳೂರು ದಕ್ಷಿಣ, ಯಲಹಂಕ, ಯಶವಂತಪುರ, ಬ್ಯಾಟರಾಯನಪುರ, ಆನೇಕಲ್ ಕ್ಷೇತ್ರಗಳಿಗೆ ಅಗತ್ಯವಿರುವ ಮತಯಂತ್ರಗಳ ಪೈಕಿ 3090 ಮತಯಂತ್ರಗಳು 7070ಕಂಟ್ರೋಲ್ ಯುನಿಟ್ಗಳನ್ನು ಗುಜರಾತ್ನಿಂದ ತರಿಸಿಕೊಳ್ಳಲಾಗಿದೆ.
ಈ ಎಲ್ಲಾ ಮತಯಂತ್ರಗಳನ್ನು ಕಂದಾಯ ಭವನದಲ್ಲಿ ಬಿಗಿ ಭದ್ರತೆಯೊಂದಿಗೆ ಸಂರಕ್ಷಿಸಿಡಲಾಗಿದ್ದು, ಶಸ್ತ್ರಸಜ್ಜಿತ ಭದ್ರತೆ ಮತ್ತು ಸಿಸಿ ಟಿವಿ ಕಣ್ಗಾವಲಿನಲ್ಲಿಡಲಾಗಿದೆ. ಈಗಾಗಲೇ ಈ ಎಲ್ಲಾ ಮತಯಂತ್ರಗಳನ್ನು ಒಂದು ಸುತ್ತು ಪರಿಶೀಲನೆ ನಡೆಸಲಾಗಿದ್ದು, ಅಂತಿಮ ಸುತ್ತಿನ ಪರಿಶೀಲನೆ ನಾಳೆಯಿಂದ ಆರಂಭವಾಗಲಿದೆ. ಬಿಇಎಲ್ನ ತಜ್ಞರು ಪ್ರತಿಯೊಂದು ಮತಯಂತ್ರಗಳನ್ನು ಪರಿಶೀಲಿಸಿ ದೃಢೀಕರಿಸಲಿದ್ದಾರೆ. ನಂತರ ಅವುಗಳನ್ನು ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗುತ್ತದೆ.
ಚುನಾವಣಾ ಆಯೋಗ ಈ ಬಾರಿ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಅಪಸ್ವರಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ವಹಿಸಿದೆ.
ಈಗಾಗಲೇ ಗುಜರಾತ್, ಉತ್ತರಪ್ರದೇಶ ಚುನಾವಣೆಗಳಲ್ಲಿ ಮತ ಯಂತ್ರ ದುರುಪಯೋಗ ಪಡಿಸಿಕೊಂಡು ಬಿಜೆಪಿ ಗೆದ್ದಿದೆ ಎಂಬ ಆರೋಪಗಳನ್ನು ಕಾಂಗ್ರೆಸ್ ಮಾಡಿದೆ. ಕರ್ನಾಟಕದಲ್ಲೂ ಅದೇ ರೀತಿಯ ಪ್ರಯತ್ನಗಳು ನಡೆಯಬಹುದು. ಹೀಗಾಗಿ ಮತಯಂತ್ರಗಳ ಬದಲಾಗಿ ಮತ ಪತ್ರಗಳನ್ನು ಬಳಕೆ ಮಾಡಿ ಎಂದು ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ನ ಹಲವು ನಾಯಕರು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.
ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಲು ನಿರಾಕರಿಸಿದ ಚುನಾವಣಾ ಆಯೋಗ, ಮತ ಯಂತ್ರಗಳನ್ನು ಬಳಸಿಯೇ ಚುನಾವಣೆ ನಡೆಸಲು ನಿರ್ಧರಿಸಿದೆ. ಆದರೆ, ಯಾವುದೇ ಅಪವಾದಗಳಿಗೆ ಅವಕಾಶ ನೀಡದಂತೆ ಸೂಕ್ತ ಪರಿಶೀಲನೆ ನಡೆಸಲು ಕ್ರಮ ಕೈಗೊಂಡಿದೆ. ಹೀಗಾಗಿ ನಾಳೆಯಿಂದ ಬೆಂಗಳೂರು ನಗರ ಜಿಲ್ಲೆಯ ಮತಯಂತ್ರಗಳ ಪರಿಶೀಲನೆ ಆರಂಭಗೊಳ್ಳಲಿದೆ.