ಬೆಂಗಳೂರು,ಫೆ.26-ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಸಭೆ ಕರೆದು ರಾಜ್ಯ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ತಿಳಿಸಿದರು.
ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾವೇರಿ ನಿರ್ವಹಣಾ ಮಂಡಳಿಯ ತೂಗು ಕತ್ತಿ ನಮ್ಮ ಮೇಲಿದೆ. ಮಂಡಳಿ ರಚನೆಯಾದರೆ ಜಲಾಶಯಗಳ ಮೇಲಿನ ನಮ್ಮ ನಿಯಂತ್ರಣ ತಪ್ಪಲಿವೆ.
ತೀರ್ಪು ಬಂದ ನಂತರ ಸರ್ಕಾರ ಯಾವ ಸಿದ್ಧತೆ ಮಾಡಿಕೊಂಡಿದೆ ಎಂದು ಅವರು ಪ್ರಶ್ನಿಸಿದರು. ಕಾನೂನು ತಜ್ಞರು ಸಲಹೆ ಪಡೆದು ಸರ್ಕಾರ ರಾಜ್ಯದ ಹಿತಕಾಪಾಡಲು ಮುಂದಿನ ಹೆಜ್ಜೆ ಇಡಬೇಕಾಗಿದೆ ಎಂದು ಗೌಡರು ಸಲಹೆ ಮಾಡಿದರು.
ಎರಡೂ ರಾಷ್ಟ್ರೀಯ ಪಕ್ಷಗಳು ಕಾವೇರಿ ವಿಚಾರದಲ್ಲಿ ಅನ್ಯಾಯವೆಸಗಿವೆ. 2007ರಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಅಧಿಕಾರ ನೀಡಿದಾಗ ಲೋಕಸಭೆಯಲ್ಲಿ ಅದನ್ನು ವಿರೋಧಿಸಿದ್ದೆ. ಇದಕ್ಕೆ ಕೇಂದ್ರ ಸಚಿವ ಅನಂತಕುಮಾರ್ ಅವರ ಸಹಕಾರ ಕೇಳಿದ್ದೆ. ಆದರೆ ನಾಳೆ ಬಂದು ಹೇಳ್ತೀನಿ ಎಂದವರು ಇದುವರೆಗೂ ಏನನ್ನೂ ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಮಿಳುನಾಡಿನ ಸರ್ವಪಕ್ಷ ನಿಯೋಗ ಪ್ರಧಾನಿಯವರನ್ನು ಭೇಟಿ ಮಾಡಿ ಮಂಡಳಿ ರಚನೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆರು ವಾರಗಳ ಕಾಲಾವಕಾಶ ನೀಡಲಾಗಿದೆ. ಈಗಾಗಲೇ ಎರಡು ವಾರ ಕಳೆದು ಹೋಗಿದೆ. ರಾಷ್ಟ್ರೀಯ ಪಕ್ಷಗಳನ್ನು ನಂಬಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
ಕಾವೇರಿ ನದಿನೀರು ಹಂಚಿಕೆ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸಂಭ್ರಮ ಪಡುವಷ್ಟೂ ರಾಜ್ಯದ ಪರವಾಗಿಲ್ಲ. ಹಲವು ಮಾರಕಾಂಶಗಳು ತೀರ್ಪಿನಲ್ಲಿ ಅಡಗಿದೆ ಎಂದ ಅವರು, ರಾಜ್ಯದ ಜನರನ್ನು ಪ್ರಚೋದನೆ ಮಾಡುವ ದೃಷ್ಟಿಯಿಂದ ನಾನು ಇದನ್ನು ಹೇಳುತ್ತಿಲ್ಲ. ಮುಂದಿನ ಪೀಳಿಗೆ ಸಂಕಷ್ಟಕ್ಕೀಡಾಗುವುದನ್ನು ತಪ್ಪಿಸಲು ಹಾಗೂ ತಮ್ಮ ಹಕ್ಕಿನ ರಕ್ಷಣೆಗಾಗಿ ಈ ವಿಚಾರವನ್ನು ಪ್ರಸ್ತಾಪಿಸುವುದಾಗಿ ಹೇಳಿದರು.
10 ಟಿಎಂಎಸಿಯಷ್ಟು ಹೆಚ್ಚುವರಿ ನೀರು ಸಿಕ್ಕಿದೆ ಎಂದು ತೀರ್ಪು ಬಂದ ದಿನ ಸಿಹಿ ಹಂಚಿ ಸಂಭ್ರಮಿಸಲಾಗಿದೆ. ಆದರೆ ವಾಸ್ತವ ಸಂಗತಿ ಬೇರೆ ಇದೆ. ಎರಡು ಬೆಳೆ ಬೆಳೆಯುತ್ತಿದ್ದ ಕಾವೇರಿ ಜಲಾನಯನ ಪ್ರದೇಶದ ರೈತರು ಒಂದು ಬೆಳೆಗೆ ಸೀಮಿತವಾಗುವಂತಾಗಿದೆ. ಏತನೀರಾವರಿಗೆ ಅವಕಾಶವಿಲ್ಲ ಎಂದು ಮಾಜಿ ಪ್ರಧಾನಿ ಆತಂಕ ವ್ಯಕ್ತಪಡಿಸಿದರು.
ಆರು ವಾರದೊಳಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಹಿತಕಾಪಾಡಲು ಸಂಸತ್ನಲ್ಲಿ ಹೋರಾಟ ಮಾಡುವುದಾಗಿ ಹೇಳಿದರು.
ನವ ಕರ್ನಾಟಕ, ಹಸಿವು ಮುಕ್ತ ಕರ್ನಾಟಕ ಎಂದು ಹೇಳುವ ರಾಜಕೀಯ ಪಕ್ಷಗಳು ಕಾವೇರಿ ಜಲಾನಯನ ಭಾಗದ ಜನರ ಹಿತ ಕಾಪಾಡಬೇಕು. ಕಾವೇರಿ ನ್ಯಾಯಾಧೀಕರಣದ ತೀರ್ಪಿನಲ್ಲಿ ಹೇಳುವುದನ್ನೆಲ್ಲ ಅನುಷ್ಠಾನಕ್ಕೆ ತರಬೇಕಾಗಿದೆ. ರಾಜ್ಯದ ಪರ ವಾದ ಮಂಡಿಸಿದ ಹಿರಿಯ ವಕೀಲ ಪಾಲಿ ಎಸ್.ನಾರಿಮನ್ ಅವರು ತಮ್ಮ ಶಕ್ತಿ ಮೀರಿ ವಾದ ಮಾಡಿದ್ದಾರೆ. ಆದರೂ ನ್ಯಾಯಾಧೀಕರಣದಿಂದ ರಾಜ್ಯಕ್ಕಾಗಿರುವ ಅನ್ಯಾಯ ನಿವಾರಣೆಯಾಗುವ ಪರಿಸ್ಥಿತಿ ಇಲ್ಲ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಾಧೀಕರಣದ ಅಂತಿಮ ತೀರ್ಪಿಗೆ ಸಂಬಂಧಿಸಿದಂತೆ ವಿಶೇಷ ಮೇಲ್ಮನವಿ ಸಲ್ಲಿಸಲಾಗಿತ್ತು ಎಂಬ ಅಂಶವನ್ನು ದೇವೇಗೌಡರು ಉಲ್ಲೇಖಿಸಿದರು.
ಕಾವೇರಿ ನಿರ್ವಹಣಾ ಮಂಡಳಿ ರಚನೆ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಸುದೀರ್ಘವಾಗಿ ಚರ್ಚೆ ಮಾಡಬೇಕಾಗಿದೆ. ಕೋರ್ಟ್ನ ಅಂತಿಮ ತೀರ್ಪಿನ ಬಗ್ಗೆ ಕಾನೂನು ತಜ್ಞರು ನೀಡಿರುವ ಅಭಿಪ್ರಾಯವನ್ನು ಗಮನಿಸಿದ್ದೇನೆ. ಒಟ್ಟಾರೆ ತೀರ್ಪು ಸಂಭ್ರಮಪಡುವಷ್ಟೂ ರಾಜ್ಯದ ಪರವಾಗಿಲ್ಲ ಎಂದು ಹೇಳಿದರು.
ಗೋಷ್ಟಿಯಲ್ಲಿ ಜೆಡಿಎಸ್ ರಾಷ್ಟ್ರೀಯಾಧ್ಯಕ್ಷ ಪಿಜಿಆರ್ ಸಿಂಧ್ಯಾ, ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್, ಕುಪೇಂದ್ರ ರೆಡ್ಡಿ ,ವಿಧಾನಪರಿಷತ್ ಸದಸ್ಯರಾದ ಚೌಡರೆಡ್ಡಿ , ರಮೇಶ್ ಬಾಬು, ಟಿ.ಎ.ಶರವಣ, ಮುಖಂಡರಾದ ಎಚ್.ಸಿ.ನೀರಾವರಿ, ಎಂ.ಸಿ.ನಾರಾಯಣರಾವ್ ಮತ್ತಿತರರು ಇದ್ದರು