ಬೆಂಗಳೂರು, ಫೆ.26- ದೇಶದ ಏಳು ರಾಜ್ಯಗಳಷ್ಟೇ ಅಲ್ಲ ರಾಷ್ಟ್ರೀಯ ಮಟ್ಟದಲ್ಲಿ ಬ್ರಾಹ್ಮಣ ನಿಗಮದ ಅವಶ್ಯಕತೆಯಿದ್ದು, ಈ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯುವುದಾಗಿ ಕೇಂದ್ರ ಸಚಿವ ಅನಂತ್ಕುಮಾರ್ ಹೇಳಿದ್ದಾರೆ.
ಬೆಂಗಳೂರಿನÀ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಆಯೋಜಿಸಲಾಗಿದ್ದ ಬೆಂಗಳೂರು ನಗರ ಬೃಹತ್ ವಿಪ್ರ ಸಮಾವೇಶದ ಸಮರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬ್ರಾಹ್ಮಣ ಸಮುದಾಯ ಬಹಳಷ್ಟು ಸಮಸ್ಯೆಗಳಿಂದ ಬಳಲುತ್ತಿದೆ. ಈ ಸಮುದಾಯದಲ್ಲಿ ಬಹಳಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಅವರಿಗೆ ಸಾಮಾಜಿಕ ನ್ಯಾಯದ ರೀತಿಯಲ್ಲಿ ಅವಶ್ಯಕ ಸಹಾಯ ಸರಕಾರಗಳಿಂದ ದೊರೆಯುತ್ತಿಲ್ಲ. ಈ ಹಿನ್ನಲೆಯಲ್ಲಿ ಬ್ರಾಹ್ಮಣ ಸಮುದಾಯದ ಅಭಿವೃದ್ದಿಗೆ ರಾಷ್ಟ್ರೀಯ ಮಟ್ಟದಲ್ಲಿ ನಿಗಮದ ಅವಶ್ಯಕತೆಯಿದ್ದು, ಈ ಬಗ್ಗೆ ಇದೇ ಬಜೆಟ್ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರಕಾರದ ಗಮನ ಸೆಳೆಯುವುದಾಗಿ ಹೇಳಿದ್ದಾರೆ.
ಇದರ ಬಗ್ಗೆ ಕೇಂದ್ರಕ್ಕೆ ತಮ್ಮದೇ ನೇತೃತ್ವದಲ್ಲಿ ನಿಯೋಗ ಕೊಂಡೊಯ್ಯುವುದಾಗಿ ಭರವಸೆ ನೀಡಿದರು. ಅಲ್ಲದೆ, ಬನಶಂಕರಿಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಬ್ರಾಹ್ಮಣ ಭವನಕ್ಕೆ ಸಂಸದರ ನಿಧಿಯಿಂದ 25ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದಾರೆ.
ಕೆಪಿಸಿಸಿ ಕಾಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಎರಡು ದಿನಗಳ ನಡೆದ ಈ ಸಮಾವೇಶ ಬಹಳ ಯಶಸ್ವಿಯಾಗಿದೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಬ್ರಾಹ್ಮಣ ಸಮುದಾಯಕ್ಕೂ ನೆರವು ಕೊಡಬೇಕು ಎನ್ನುವ ಆಗ್ರಹವನ್ನು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆವು. ಆದರೆ ಕಾರಣಾಂತರಗಳಿಂದ ನಮ್ಮ ಸಮಾಜಕ್ಕೆ ಯಾವುದೇ ಕಾರ್ಯಕ್ರಮಗಳು ಈಡೇರಲಿಲ್ಲಾ. ಮುಂಬರುವ ದಿನಗಳಲ್ಲಿ ಭರವಸೆಗಳ ಈಡೇರಿಕೆಗೆ ನಾವು ಬದ್ದರಾಗಿದ್ದೇವೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಬೆಂಗಳೂರನ್ನು ಕಟ್ಟಿದವರು ಕೆಂಪೇಗೌಡರು, ಬೆಂಗಳೂರಿಗೆ ಕುಡಿಯುವ ನೀರು ದೊರೆಯುವಂತೆ ಮಾಡಿದ್ದು ಸರ್ ಎಂ ವಿಶ್ವೇಶ್ವರಯ್ಯನರು. ಬ್ರಾಹ್ಮಣರು ಸಮಾಜಕ್ಕೆ ನೀಡಿರುವ ಕೊಡುಗೆ ಬಹಳ ಅಪಾರ ಎಂದು ಹೇಳಿದರು.
ವಸತಿ ಸಚಿವ ಎಂ.ಕೃಷ್ಣಪ್ಪ, ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮಿನರಸಿಂಹ ಪೀಠಂ ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಕಟೇಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.