ಮೇಘಾಲಯ ಮತ್ತು ನಾಗಾಲ್ಯಾಂಡ್‍ನಲ್ಲಿ ನಾಳೆ ಮಹತ್ವದ ವಿಧಾನಸಭೆ ಚುನಾವಣೆ

ಶಿಲ್ಲಾಂಗ್/ಕೊಹಿಮಾ, ಫೆ.26- ಈಶಾನ್ಯ ಭಾರತದ ಸಪ್ತ ಸಹೋದರಿ ರಾಜ್ಯಗಳಲ್ಲಿ ಪ್ರಮುಖವಾದ ಮೇಘಾಲಯ ಮತ್ತು ನಾಗಾಲ್ಯಾಂಡ್‍ನಲ್ಲಿ ನಾಳೆ ಮಹತ್ವದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಭಾರೀ ಬಿಗಿಭದ್ರತೆಯಲ್ಲಿ ಮತದಾನಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿದೆ.

ನಾಳೆ ಬೆಳಗ್ಗೆ 7 ರಿಂದ ಸಂಜೆ 4ವರೆಗೆ ಮತದಾನ ನಡೆಯಲಿದೆ. ಈ ಎರಡೂ ರಾಜ್ಯಗಳ ತೀರಾ ಒಳ ಪ್ರದೇಶದ ಜಿಲ್ಲೆಗಳಲ್ಲಿ ಮಧ್ಯಾಹ್ನ 3 ಗಂಟೆಗೆ ಮತದಾನ ಮುಕ್ತಾಯವಾಗಲಿದೆ. ಎರಡೂ ರಾಜ್ಯಗಳು ತಲಾ 60 ಸದಸ್ಯ ಸ್ಥಾನಗಳನ್ನು ಹೊಂದಿದ್ದು, 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಮೇಘಾಲಯದ ಈಸ್ಟ್ ಗ್ಯಾರೋ ಹಿಲ್ಸ್ ಜಿಲ್ಲೆಯಲ್ಲಿ ಬಾಂಬ್ ಸ್ಫೋಟದಲ್ಲಿ ಎನ್‍ಸಿಪಿ ಅಭ್ಯರ್ಥಿ ಜೋನಾಥನ್ ಎನ್. ಸಂಗ್ಮಾ ಹತರಾದ ಹಿನ್ನೆಲೆಯಲ್ಲಿ ವಿಲಿಯಂನಗರ್ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.
ನಾಗಾಲ್ಯಾಂಡ್‍ನಲ್ಲಿ ಎನ್‍ಡಿಪಿಪಿ ಮುಖ್ಯಸ್ಥ ನೀಫಿಯು ರಿಯಾ ಅವರು ನಾರ್ತನ್ ಅಂಗಂ-2 ವಿಧಾನಸಭಾ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತ್ರಿಪುರದೊಂದಿಗೆ ಈ ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶ ಮಾ.3ರಂದು ಪ್ರಕಟಗೊಳ್ಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ