ಬೆಂಗಳೂರು, ಫೆ.25-ಯುಗಾದಿ ನಂತರ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ರಾಜ್ಯ ಎಲ್ಲ ಕ್ಷೇತ್ರಗಳಿಂದಲೂ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ಮಾತ್ರ ಈಗಾಗಲೇ ತನ್ನ ಚುನಾವಣಾ ಕಣಕ್ಕಿಳಿಯಲು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಯುಗಾದಿ ನಂತರ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದೆಂದು ಅವರು ಹೇಳಿದರು.
ಪಕ್ಷ ಸಂಘಟನೆಗಾಗಿ ತಾವು ರಾಜ್ಯಾದ್ಯಂತ ಎರಡನೇ ಹಂತದಲ್ಲಿ ಮತ್ತೆ ಪ್ರವಾಸ ಕೈಗೊಳ್ಳುವುದಾಗಿ ಎಚ್ಡಿಕೆ ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಮಕೃಷ್ಣ ಹೆಗಡೆ ಅವರು ನನ್ನ ರಾಜಕೀಯ ಗುರುಗಳು ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಅವರು ಏನು ಮಾತನಾಡುತ್ತಿದ್ದಾರೆ ಎಂಬುದೇ ಅವರಿಗೆ ಗೊತ್ತಿಲ್ಲ. ಇನ್ನು ಸ್ವಲ್ಪದಿನ ಹೋದರೆ ರಾಹುಲ್ ಗಾಂಧಿ ರಾಜಕೀಯ ಗುರು ಎಂದರೂ ಅಚ್ಚರಿಯಿಲ್ಲ ಎಂದು ವ್ಯಂಗ್ಯವಾಡಿದರು.
ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ನಿಧನಕ್ಕೆ ಸಂತಾಪ ಸೂಚಿಸಿದ ಕುಮಾರಸ್ವಾಮಿ, ಭಾರತೀಯ ಚಿತ್ರರಂಗ ಉತ್ತಮ ನಟಿಯನ್ನು ಕಳೆದುಕೊಂಡಿದೆ. ಒಂದು ಭಾಷೆಗೆ ಶ್ರೀದೇವಿ ಸೀಮಿತವಾಗಿರಲ್ಲಿಲ್ಲ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು.