ಮೈಸೂರು, ಫೆ.25-ನಗರದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಗಮ ಶಾಸ್ತ್ರದ ನಿಯಮದಂತೆ ಪೂಜಾ ವ್ಯವಸ್ಥೆಗಳನ್ನು ಕಟ್ಟುನಿಟ್ಟಾಗಿ ಮಾಡಬೇಕೆಂದು ಉಪಲೋಕಾಯುಕ್ತ ನ್ಯಾ.ಸುಭಾಷ್ ಬಿ.ಅಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿನ ದೇವಸ್ಥಾನದ ಬಗ್ಗೆ ಕೇಳಿ ಬಂದ ಕೆಲವು ದೂರುಗಳ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಆಗಮ ಶಾಸ್ತ್ರದಂತೆ ಚಾಮುಂಡೇಶ್ವರಿ ದೇವಾಲಯದ ಬಾಗಿಲನ್ನು ಪ್ರಾತಃಕಾಲ ಬೆಳಗ್ಗೆ 4.30ರಿಂದ 5.30ರವರೆಗೆ ತೆರೆದು ಆಗಮಿತ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ಅಭಿಷೇಕ, ಅರ್ಚನೆ, ಪೂಜಾ ವಿಧಾನಗಳು ಪ್ರತಿನಿತ್ಯ ನಿಗದಿತ ಸಮಯದಲ್ಲಿ ನಡೆಯಬೇಕು. ನಂತರ ಭಕ್ತಾಧಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು.
ತಿರುಪತಿ ತಿರುಮಲ ದೇವಸ್ಥಾನದ ಎಲ್ಲ ನಿಯಮಗಳು ಚಾಮುಂಡೇಶ್ವರಿ ದೇವಾಲಯದ ಸಿಬ್ಬಂದಿಗೆ ಅನ್ವಯವಾಗುತ್ತದೆ. ಪ್ರಧಾನ ಅರ್ಚಕರು ಸೇರಿದಂತೆ ಎಲ್ಲ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಾಗಿ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಶ್ರದ್ಧಾ ಭಕ್ತಿಯಿಂದ ನಿರ್ವಹಿಸಿ, ದೇವಸ್ಥಾನದ ಪ್ರಾವಿತ್ರತೆಯನ್ನು ಕಾಪಾಡುವಂತೆ ಸೂಚಿಸಿದ್ದಾರೆ. ದೇವಿಗೆ ನಿತ್ಯ ಅಭಿಷೇಕಕ್ಕೆ ದೇವಿ ಕೆರೆಯಿಂದ ನೀರು ತರುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಅಲ್ಲಿಂದಲೇ ಪ್ರತಿನಿತ್ಯ ನೀರು ತರಬೇಕೆಂದು ತಿಳಿಸಿದ್ದಾರೆ.
ಭಕ್ತರ ಧಾರ್ಮಿಕ ಭಾವನೆ, ನಂಬಿಕೆಯ ವಿಷಯವಾಗಿರುವುದರಿಂದ ಯಾರು, ಯಾರಿಗೆ ಯಾವ ಯಾವ ಕೆಲಸ ವಹಿಸಲಾಗಿದೆಯೋ ಅದನ್ನು ನಿಭಾಯಿಸಬೇಕೆಂದು ಸೂಚಿಸಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಯಾರಾದರೂ ನಿಧನರಾದರೆ ದೇವಸ್ಥಾನ ಮುಚ್ಚಲಾಗುತ್ತದೆ. ಇದರಿಂದ ದೇಶ, ವಿದೇಶದಿಂದ ಬರುವ ಭಕ್ತರಿಗೆ ದೇವರ ದರ್ಶನವಾಗದೆ ನಿರಾಸೆಯಿಂದ ಹಿಂದಿರುಗುತ್ತಾರೆ. ಅದಲ್ಲದೆ ಕುಟುಂಬದವರಿಗೆ ಅಂತ್ಯಕ್ರಿಯೆ ಬೇಗ ಮಾಡುವಂತೆ ಹೇಳಲು ಸಾಧ್ಯವಿಲ್ಲ. ಆದ್ದರಿಂದ ದೇವಸ್ಥಾನದ ಸುತ್ತಲು ಗಡಿಯೊಂದನ್ನು ನಿಗದಿಗೊಳಿಸಿ ಪ್ರತಿನಿತ್ಯದ ಪೂಜಾ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೀತಿ ನಿಯಮ ರೂಪಿಸಿ ಶವ ಸಾಗಿಸಲು ದೇವಸ್ಥಾನದ ಸಮೀಪದ ಬದಲು ಪ್ರತ್ಯೇಕ ಮಾರ್ಗವೊಂದನ್ನು ಸಿದ್ದಪಡಿಸುವಂತೆ ಜಿಲ್ಲಾಧಿಕಾರಿ ರಂದೀಪ್ ಅವರಿಗೆ ಸೂಚಿಸಿದರು.
ಯಾವುದೇ ಕಾರಣಕ್ಕೂ ದೇವಸ್ಥಾನದ ಬಾಗಿಲನ್ನು ಬಂದ್ ಮಾಡಬೇಡಿ ಎಂದು ಸೂಚಿಸಿದರು. ದೇವಾಲಯ ಪಾರಂಪರಿಕ ಕಟ್ಟಡವಾಗಿರುವುದರಿಂದ ಸುತ್ತಲಿನ 100 ಅಡಿಗಳ ಪ್ರದೇಶಗಳಲ್ಲಿ ಯಾವುದೇ ಕಟ್ಟಡ ವಾಣಿಜ್ಯ ಉದ್ಯಮ ನಡೆಸಲು ಅವಕಾಶ ನೀಡಬೇಡಿ ಎಂದು ಆದೇಶಿಸಿದ್ದಾರೆ.
ದೇವಸ್ಥಾನದ ಗಡಿಯನ್ನು ನಿಗಧಿಗೊಳಿಸಿ ದೇವಸ್ಥಾನದ ಆದಾಯದಿಂದ ದೇವಾಲಯದ ಅಭಿವೃದ್ಧಿಯೊಂದಿಗೆ ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸಿಕೊಡಿ ಎಂದರು.
ಸಭೆಯಲ್ಲಿ ಜಿಲ್ಲಾಧಿಕರಿ ರಂದೀಪ್, ತಹಸೀಲ್ದಾರ್ ಯತೀರಾಜ್, ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್, ದೀಕ್ಷಿತ್, ರಾಜ್ಯ ಆಗಮ ಪಂಡಿತ್ ಶಿವಕುಮಾರ್ ದೀಕ್ಷಿತ್ ಸೇರಿದಂತೆ ಮತ್ತಿತರರು ಇದ್ದರು.