ಶ್ರೀನಗರ/ಇಸ್ಲಾಮಾಬಾದ್, ಫೆ.25-ಕಣಿವೆ ರಾಜ್ಯ ಕಾಶ್ಮೀರದ ಗಡಿ ಭಾಗಗಳ ಮೇಲೆ ಕದನವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿಗಳನ್ನು ನಡೆಸುತ್ತಿರುವ ಪಾಕಿಸ್ತಾನ ಮತ್ತೊಂದು ಭಾರೀ ಆಕ್ರಮಣಕ್ಕೆ ಹುನ್ನಾರ ನಡೆಸಿದೆ. ಇದಕ್ಕೆ ಪುಷ್ಟಿ ನೀಡುವಂತೆ ಬಾರಾಮುಲ್ಲಾ ಜಿಲ್ಲೆಯ ಉರಿ ವಲಯಕ್ಕೆ ಹೊಂದಿಕೊಂಡಿರುವ ತನ್ನ ಚಕೋತಿ ಸೇನಾ ನೆಲೆ ಮೂಲಕ ಧ್ವನಿವರ್ಧಕಗಳಲ್ಲಿ ಗಡಿ ಭಾಗದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದು, ಈ ಕೂಡಲೇ ತೆರವುಗೊಳ್ಳುವಂತೆ ಧಮಕಿ ಹಾಕುತ್ತಿದೆ. ಈ ಪ್ರದೇಶಗಳ ಮೇಲೆ ಮತ್ತೆ ಷೆಲ್ ದಾಳಿ ನಡೆಸುವುದು ಪಾಕಿಸ್ತಾನದ ಕುತಂತ್ರವಾಗಿದೆ.
ಭಾರತವು ಗಡಿಯಾಚೆಯಿಂದ ತನ್ನ ಮೇಲೆ ಅಪ್ರಚೋದಿತ ದಾಳಿ ನಡೆಸುತ್ತಿದ್ದೆ. ಗಡಿ ನಿಯಂತ್ರಣ ರೇಖೆ(ಎಲ್ಒಸಿ)ಯ ರಾವಲ್ಕೋಟ್ನಲ್ಲಿರುವ ತನ್ನ ನೆಲೆಗಳನ್ನು ಧ್ವಂಸಗೊಳಿಸಿದೆ ಎಂದು ಆರೋಪಿಸಿರುವ ಪಾಕಿಸ್ತಾನವು ಆರು ಪ್ರಮುಖ ರಾಷ್ಟ್ರಗಳ ರಾಜತಾಂತ್ರಿಕರಿಗೆ ಈ ಬಗ್ಗೆ ದೂರು ನೀಡಿ ತನ್ನ ಬಗ್ಗೆ ಅನುಕಂಪ ಗಿಟ್ಟಿಸಲು ಕುತಂತ್ರ ರೂಪಿಸಿದ್ದು, ಮತ್ತೊಂದೆಡೆ ಪ್ರತಿ ದಾಳಿಗೂ ಸಜ್ಜಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಉರಿ ವಲಯಕ್ಕೆ ಸಮೀಪದಲ್ಲಿ ಪಾಕಿಸ್ತಾನದ ಚಕೋತಿ ಸೇನಾ ಠಾಣ್ಯವಿದೆ. ಅಲ್ಲಿಂದ ಭಾರತದ ಗಡಿ ಗ್ರಾಮಗಳ ಮೇಲೆ ಷೆಲ್ ಮತ್ತು ಗುಂಡಿನ ದಾಳಿಗಳನ್ನು ನಡೆಸಲು ಸಿದ್ಧವಾಗಿರುವ ಪಾಕಿಸ್ತಾನವು ಈ ಕೂಡಲೇ ಈ ಸ್ಥಳಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದೆ. ಈ ಮುನ್ಸೂಚನೆ ಹಿಂದೆಯೇ ಭಾರೀ ದಾಳಿ ನಡೆಸಿ ಭಾರತಕ್ಕೆ ಪ್ರತ್ಯುತ್ತರ ನೀಡುವುದು ಪಾಕಿಸ್ತಾನದ ದುಷ್ಟ ಆಲೋಚನೆಯಾಗಿದೆ.
ಇದಕ್ಕೂ ಮುನ್ನ ನಿನ್ನೆ ಬೆಳಗ್ಗೆ ಶಿಲ್ಕೋಟ್ ಮತ್ತು ಚುರಾಂಡಾ ಅವಳಿ ಗ್ರಾಮಗಳ ಗ್ರಾಮಸ್ಥರಿಗೂ ಪಾಕಿಸ್ತಾನಿ ಸೇನಾ ಪಡೆಗಳು ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಿದ್ದವು. ಭಾರತದ ಗುಂಡಿನ ದಾಳಿ ಮತ್ತು ಷೆಲ್ಗಳ ಮೊರೆತಕ್ಕೆ ನಾವು ಪ್ರತ್ಯುತ್ತರ ನೀಡುತ್ತಿದ್ದೇವೆ. ಭಾರತೀಯ ವಶದಲ್ಲಿರುವ ಕಾಶ್ಮೀರದ ಭಾಗದಲ್ಲಿರುವ ಗ್ರಾಮಸ್ಥರು ಅಪಾಯದಿಂದ ತಪ್ಪಿಸಿಕೊಳ್ಳಲು ಈ ಕೂಡಲೇ ಜಾಗ ಖಾಲಿ ಮಾಡುವಂತೆ ಲೌಡ್ ಸ್ಪೀಕರ್ನಲ್ಲಿ ಪಾಕ್ ರೇಂಜರ್ಗಳು ಎಚ್ಚರಿಕೆ ನೀಡಿದ್ದರು. ಈ ಮುನ್ಸೂಚನೆ ಹಿಂದೆಯೇ ಪಾಕಿಸ್ತಾನ ಯೋಧರು ಭಾರೀ ಗುಂಡಿನ ದಾಳಿ ನಡೆಸಿ ಆತಂಕದ ವಾತಾವರಣ ಸೃಷ್ಟಿಸಿದ್ದರು.
ಕಳೆದ ವಾರದಿಂದ ಭಾರತ-ಪಾಕ್ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನೆಲೆಗೊಂಡಿದ್ದು ಪರಸ್ಪರ ದಾಳಿ ಮತ್ತು ಪ್ರತಿದಾಳಿ ನಡೆಯುತ್ತಿದ್ದು ಗಡಿ ಭಾಗದ ಗ್ರಾಮಸ್ಥರು ಹೆದರಿ ಕಂಗಾಲಾಗಿದ್ದಾರೆ.