ನವದೆಹಲಿ, ಫೆ.25-ಭಾರತವು ಈಗ ಮಹಿಳಾ ಅಭಿವೃದ್ದಿ ಪರಿಕಲ್ಪನೆಯಿಂದ ವನಿತೆಯರ ನೇತೃತ್ವದ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಪ್ರತಿ ತಿಂಗಳ ಕೊನೆ ಭಾನುವಾರದಂದು ಬಾನುಲಿಯಲ್ಲಿ ಬಿತ್ತರವಾಗುವ ಮನ್ ಕಿ ಬಾತ್ (ಮನದ ಮಾತು) ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ ಕುರಿತು ಪ್ರಸ್ತಾಪಿಸಿದ ಮೋದಿ, ಇಂದಿನ ವನಿತೆಯರ ಸಾಮಥ್ರ್ಯ ಮತ್ತು ಪ್ರತಿಭೆಯ ಗುಣಗಾನ ಮಾಡಿದರು.
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ನಾಯಕಿಯರಾಗುತ್ತಿದ್ದಾರೆ. ಇದೊಂದು ಪೂರಕ ಹೆಜ್ಜೆ ಎಂದು ಪ್ರಧಾನಿ ಮೆಚ್ಚುಗೆ ಸೂಚಿಸಿದರು.
ಗ್ರಾಮದಲ್ಲಿ ಸಗಣಿ ಸೇರಿದಂತೆ ಜಾನುವಾರು ತ್ಯಾಜ್ಯವನ್ನು ಸ್ವಚ್ಚ ಇಂಧನ ಉತ್ಪಾದನೆ ಬಳಸುವ ಗೊಬರ್ ಧನ್ ಎಂಬ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದೆ. ಸ್ವಚ್ಚ ಇಂಧನ ಮತ್ತು ಹಸಿರು ಉದ್ಯೋಗಕ್ಕಾಗಿ ಕೈಗೊಂಡಿರುವ ಈ ಅಭಿಯಾನದಲ್ಲಿ ಗ್ರಾಮೀಣ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಧಾನಿ ಕರೆ ನೀಡಿದರು.
ದಿನನಿತ್ಯದ ಬದುಕಿನಲ್ಲಿ ಜನರು ಸುರಕ್ಷತೆಗೆ ಆದ್ಯತೆ ನೀಡಬೇಕು. ದೇಶದಲ್ಲಿ ಸುರಕ್ಷತಾ ಪ್ರಜ್ಞೆಯ ಸಮಾಜ ನಿರ್ಮಾಣವಾಗಬೇಕು ಎಂದು ಅವರು ಸಲಹೆ ಮಾಡಿದರು.