ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಲವು ದೇವಸ್ಥಾನಗಳಿಗೆ ಭೇಟಿ ಬಳಿಕ ರೈತರ ಜೊತೆ ಸಂವಾದ

ಬೀದರ್: ಜಿಲ್ಲೆ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದರು. ಬಳಿಕ ರೈತರ ಜೊತೆ ಸಂವಾದªನ್ನು ನಡೆಸಿದರು.

ನಿನ್ನೆ ರಾತ್ರಿ 8.15ರ ಸುಮಾರಿಗೆ ಬೀದರ್ ನಗರಕ್ಕೆ ಆಗಮಿಸಿದ್ದ ಅಮಿತ್ ಷಾ ಇಂದು ಬೆಳಗ್ಗೆ ಇಲ್ಲಿಯ ಸುಪ್ರಸಿದ್ಧ ಝರಣಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಬೇಕಾಗಿತ್ತು. ಎದೆ ಮಟ್ಟದ ನೀರಿನಲ್ಲಿ 600 ಮೀಟರ್‍ವರೆಗೂ ತೆರಳಿ ನರಸಿಂಹ ಸ್ವಾಮಿ ದೇವರ ದರ್ಶನ ಪಡೆಯಬೇಕಾಗಿತ್ತು. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾರಿಗೆ ಅಲ್ಪ ಪ್ರಮಾಣದ ಜ್ವರವಿದ್ದ ಹಿನ್ನೆಲೆ ನರಸಿಂಹಸ್ವಾಮಿ ದೇಗುಲಕ್ಕೆ ಭೇಟಿ ನೀಡಲಿಲ್ಲ. ಬದಲಾಗಿ ಬೀದರ್ ನಗರದ ಸುಪ್ರಸಿದ್ಧ ಗುರುದ್ವಾರಕ್ಕೆ ತೆರಳಿ ಗುರುನಾನಕ್ ದೇವ್ ಜೀ ದರ್ಶನ ಪಡೆದರು. ಶತಮಾನದಿಂದ ಭೀಕರ ಬರಗಾಲದಲ್ಲಿಯೂ ಎಂದಿಗೂ ಬತ್ತದ ಗುರುನಾನಕ್ ಜೀ ಅಮೃತ ಕುಂಡದ ನೀರು ಸಿಂಪಡಿಸಿಕೊಂಡು ಪತ್ನಿ ಸೋನಲ್ ಷಾ ಜೊತೆಗೂಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಬಿಜೆಪಿ ಸಂಸದ ಭಗವಂತ್ ಖೂಭಾ, ಶಾಸಕ ಪ್ರಭು ಚವ್ಹಾಣ, ವಿಧಾನ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪುರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇಲ್ಲಿಯ ಸಿಖ್ ಗುರುಗಳು ಅಮಿತ್ ಷಾರಿಗೆ ಪಗಡಿ, ಖಡ್ಗ ನೀಡಿ ಸನ್ಮಾನಿಸಿ, ಗುರುದ್ವಾರದ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು. ಬಳಿಕ ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ರೇಕುಳಗಿ ಮೌಂಟ್‍ನ ಬುದ್ಧ ವಿಹಾರಕ್ಕೆ ತೆರಳಿದರು.

ಬಿಗಿಭದ್ರತೆಯಲ್ಲಿ ರೇಕುಳಗಿ ಮೌಂಟ್‍ನ ಬುದ್ಧವಿಹಾರಕ್ಕೆ ಆಗಮಿಸಿದ ಅಮಿತ್ ಷಾಗೆ ಸ್ಥಳೀಯ ದಲಿತ ಮುಖಂಡರು ಪುಷ್ಪಾರ್ಚನೆ ಮಾಡುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಬಳಿಕ ಬೌದ್ಧ ಧರ್ಮ ಗುರುಗಳಿಂದ ಅಮಿತ್ ಷಾ ದಂಪತಿ ಆಶೀರ್ವಚನ ಪಠಿಸಿದರು. ಇದಾದ ಬಳಿಕ ಮಂಗಲಗಿ ಗ್ರಾಮಕ್ಕೆ ತೆರಳಿದ ಅಮಿತ್ ಷಾ, ಕಳೆದ ವರ್ಷ ಸಾಲಬಾಧೆಯಿಂದ ಮೃತಪಟ್ಟ ಮೂವರು ರೈತರ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮಂಗಲಗಿ ಗ್ರಾಮದ ಶಿವರಾಜ್ ಅಲರಡ್ಡಿ, ಚನ್ನಯ್ಯ ಸ್ವಾಮಿ, ಚಂದ್ರಪ್ಪ ಗೊಂಡ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಮೃತ ರೈತ ಶಿವರಾಜ್ ಅಲರೆಡ್ಡಿ ಮನೆಗೆ ಭೇಟಿ ನೀಡಿದ ವೇಳೆ ಅಮಿತ್ ಷಾಗೆ ಕುರ್ಚಿ ಹಾಕಿದ್ದರೂ ಸಹ ಕುಟುಂಬಸ್ಥರೊಂದಿಗೆ ನೆಲದ ಮೇಲೆ ಕುಳಿತುಕೊಂಡೇ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮಂಗಲಗಿ ಗ್ರಾಮದಿಂದ ಹುಮ್ನಾಬಾದ್‍ಗೆ ತೆರಳಿದ ಅಮಿತ್ ಷಾ ವೀರಭದ್ರೇಶ್ವರ ಸ್ವಾಮಿ ದರ್ಶನ ಪಡೆದರು.

ಹುಮನಾಬಾದ್‍ನ ವೀರಭದ್ರೇಶ್ವರ ದೇವಸ್ಥಾನದಲ್ಲಿರುವ ಕಲ್ಯಾಣ ಮಂಟಪದಲ್ಲಿ ಕಬ್ಬು ಬೆಳೆಗಾರರೊಂದಿಗೆ ಅಮಿತ್ ಷಾ ಸಂವಾದ ನಡೆಸಿದರು. ಈ ವೇಳೆ ರೈತ ಸಿದ್ರಾಮಪ್ಪ ಅಣದೂರೆ ಎಂಬುವವರು ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಸ್ವಾಮಿನಾಥನ್ ವರದಿಯಂತೆ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿದರು. ಈ ವೇಳೆ ರೈತರ ಪ್ರಶ್ನೆಗೆ ಉತ್ತರಿಸಿದ ಅಮಿತ್ ಷಾ ಅಧಿಕಾರಕ್ಕೆ ಬಂದ 90 ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಇನ್ನು ಬೀದರ್ ಜಿಲ್ಲೆಯ ಬಿಎಸ್‍ಕೆ ಕಾರ್ಖಾನೆ ಮುಚ್ಚಿದ್ದರಿಂದ ರೈತರು ಸಂಕಷ್ಟದಲ್ಲಿದ್ದು, ಕಾರ್ಖಾನೆ ಪುನಾರಂಭಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಾರ್ಖಾನೆ ಪುನಾರಂಭಿಸುವುದಾಗಿ ರೈತರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭರವಸೆ ನೀಡಿದರು. ಬಳಿಕ ಹೆಲಿಕಾಪ್ಟರ್ ಮೂಲಕ ಹುಮನಾಬಾದ್‍ನಿಂದ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ನಡೆಯಬೇಕಿದ್ದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ನವಶಕ್ತಿ ಸಮಾವೇಶಕ್ಕೆ ತೆರಳಿದರು. ಒಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬೀದರ್ ಜಿಲ್ಲೆಯಲ್ಲಿ ಮಿಂಚಿನ ಸಂಚಾರ ಬಿಜೆಪಿ ಜಿಲ್ಲಾ ಘಟಕಕ್ಕೆ ಆನೆ ಬಲ ತಂದುಕೊಟ್ಟಿದ್ದು, ಚುನಾವಣೆ ವೇಳೆ ಮತದಾರ ಪ್ರಭು ಬಿಜೆಪಿಗೆ ಆಶೀರ್ವದಿಸ್ತಾನಾ ಇಲ್ಲವಾ ಎಂಬುದನ್ನು ಕಾದು ನೋಡಬೇಕು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ