ಬೆಂಗಳೂರು, ಫೆ.25-ರಾಜ್ಯದ ಪೊಲೀಸ್ ಅಧಿಕಾರಿ ಹಾಗೂ ಅವರ ಅವಲಂಬಿತ ಸದಸ್ಯರಿಗಾಗಿ ಜಾರಿಗೆ ತಂದಿರುವ ಆರೋಗ್ಯ ಭಾಗ್ಯ ಯೋಜನೆಯಡಿ 12.28 ಕೋಟಿ ರೂ. ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಅವರ ಅವಲಂಬಿತರಿಗಾಗಿ ಆಗಿರುವ ವೈದ್ಯಕೀಯ ವೆಚ್ಚ ಮರುಪಾವತಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಈ ಹಣವನ್ನು ಬಿಡುಗಡೆ ಮಾಡಲಾಗಿದೆ.
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಆರೋಗ್ಯ ಭಾಗ್ಯ ಯೋಜನೆಯಡಿ 49.14 ಕೋಟಿ ಅನುದಾನವನ್ನು ಒದಗಿಸಲಾಗಿತ್ತು. ಕಳೆದ ಏಪ್ರಿಲ್ನಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ವಿವಿಧ ಆಸ್ಪತ್ರೆಗಳಲ್ಲಿ ಪಡೆದಿರುವ ವೈದ್ಯಕೀಯ ಚಿಕಿತ್ಸೆ ಬಿಲ್ಗಳ ಮರುಪಾವತಿಗಾಗಿ ಈ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಬಾಕಿ ಇರುವ ವಿವಿಧ ಆಸ್ಪತ್ರೆಗಳ ಬಿಲ್ಗಳ ಮರುಪಾವತಿಗಾಗಿ ಬಾಕಿ ಇರುವ 4ನೇ ಕಂತಿನ ಅನುದಾನ 12.28 ಕೋಟಿ ಬಿಡುಗಡೆ ಮಾಡುವಂತೆ ರಾಜ್ಯ ಪೆÇಲೀಸ್ ಮಹಾನಿರ್ದೇಶಕರು ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಹಿನ್ನೆಲೆಯಲ್ಲಿ ಈ ಹಣ ಬಿಡುಗಡೆ ಮಾಡಲಾಗಿದೆ.
ಈಗಾಗಲೇ ಎರಡು ಹಾಗೂ ಮೂರನೇ ಕಂತಿನಲ್ಲಿ 24.47 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು.