ಮುಂಬೈ, ಫೆ.25- ದುಬೈನಲ್ಲಿ ಆಪ್ತ ಸಂಬಂಧಿಯ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ತೆರಳಿ ಹೃದಯಾಘಾತದಿಂದ ಹಠಾತ್ ಸಾವಿಗೀಡಾದ ಖ್ಯಾತ ಅಭಿನೇತ್ರಿ ಶ್ರೀದೇವಿ ಅವರ ಪಾರ್ಥೀವ ಶರೀರ ಇಂದು ರಾತ್ರಿ 8ರ ಸುಮಾರಿಗೆ ಮುಂಬೈಗೆ ಬರುವ ನಿರೀಕ್ಷೆ ಇದೆ.
ದುಬೈ ಆಸ್ಪತ್ರೆಯಲ್ಲಿ ಶ್ರೀದೇವಿ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೆಲವು ಪ್ರಕ್ರಿಯೆಗಳು ಮುಗಿದ ನಂತರ ವಿಶೇಷ ವಿಮಾನದಲ್ಲಿ ಅವರ ಮೃತ ದೇಹ ರಾತ್ರಿ 8ಕ್ಕೆ ಮುಂಬೈನ ಹಂದೇರಿ ಪ್ರದೇಶದಲ್ಲಿರುವ ಅವರ ನಿವಾಸಕ್ಕೆ ಬರುವ ನಿರೀಕ್ಷೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶವ ಪರೀಕ್ಷೆ, ಮೊದಲಾದ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಿ ಭಾರತಕ್ಕೆ ದೇಹವನ್ನು ರವಾನಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾಸ್ವರಾಜ್ ಈಗಾಗಲೇ ದುಬೈನ ಸರ್ಕಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಹಂದೇರಿಯಲ್ಲಿ ಜನಸಾಗರ:
ಶ್ರೀದೇವಿ ಅವರ ನಿವಾಸ ಮುಂಬೈನ ಹಂದೇರಿಯಲ್ಲಿ ಬೆಳಗ್ಗಿನಿಂದಲೇ ದುಃಖತಪ್ತ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ರಾತ್ರಿ ಪಾರ್ಥಿವ ಶರೀರ ಮುಂಬೈಗೆ ಬಂದ ನಂತರ ಸಾರ್ವಜನಿಕ ದರ್ಶನಕ್ಕೆ ಇರಿಸಿ ನಾಳೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.