ಬೆಂಗಳೂರು, ಫೆ.24- ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕರಾವಳಿ ತೀರದ ಹಂತಕರು ಹತ್ಯೆ ಮಾಡಿ ಪರಾರಿಯಾಗಿರಬಹುದೆಂದು ಎಸ್ಐಟಿ ಶಂಕಿಸಿದ್ದು, ಆ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದೆ.
ಹತ್ಯೆ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಕೆಲವರನ್ನು ಕರೆತಂದು ಎಸ್ಐಟಿ ವಿಚಾರಣೆ ನಡೆಸುತ್ತಿದೆ.
ಹಂತಕರು ಗೌರಿ ಲಂಕೇಶ್ ಅವರನ್ನು ಕೊಲೆ ಮಾಡಿ ನಂತರ ಎಲ್ಲಿ ತಂಗಿದ್ದರು ಎಂಬುದನ್ನು ಎಸ್ಐಟಿ ಪತ್ತೆ ಹಚ್ಚಿದ್ದು, ಹಂತಕರಿಗೆ ಪರಾರಿಯಾಗಲು ಯಾರು ಶೆಲ್ಟರ್ ಕೊಟ್ಟಿದ್ದರು ಎಂಬ ಬಗ್ಗೆಯೂ ಸಹ ಮಾಹಿತಿ ಕಲೆ ಹಾಕಿದೆ.
ಗೌರಿ ಲಂಕೇಶ್ ಅವರನ್ನು ಕೊಲೆ ಮಾಡಿ ಪರಾರಿಯಾಗಿರುವ ಹಂತಕರು ಯಾರು ಎಂಬುದನ್ನು ಗುರುತಿಸಿರುವ ಎಸ್ಐಟಿ ಅವರಿಗಾಗಿ ಬಲೆ ಬೀಸಿದೆ.
ಬೆಂಗಳೂರಿಗೆ ಬಂದು ಶಸ್ತ್ರಾಸ್ತ್ರ ಮಾರಾಟಕ್ಕೆ ಯತ್ನಿಸಿದ್ದ ಮದ್ದೂರು ಮೂಲದ ನವೀನ್ ಎಂಬುವವರನ್ನು ಈಗಾಗಲೇ ಬಂಧಿಸಲಾಗಿದೆ. ಎಸ್ಐಟಿ ಆತನನ್ನು ತನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿ ಗೌರಿ ಲಂಕೇಶ್ ಕೊಲೆಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.