ಇನ್ನೊಂದು ವಜ್ರ ವ್ಯಾಪಾರಿಯ ದೊಡ್ಡ ಹಗರಣ

ನವದೆಹಲಿ, ಫೆ.24-ಡೈಮೆಂಡ್ ಕಿಂಗ್ ನೀರವ್ ಮೋದಿ ಮತ್ತು ರೋಟೊಮ್ಯಾಕ್ ಪೆನ್ ಕಂಪನಿ ಪ್ರವರ್ತಕ ವಿಕ್ರಮ್ ಕೊಠಾರಿ ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ ಪ್ರಕರಣಗಳ ನಂತರ ಅದೇ ರೀತಿ ದೊಡ್ಡ ಹಗರಣಗಳು ಒಂದೊಂದೇ ಬೆಳಕಿಗೆ ಬರುತ್ತಿವೆ.

ರಾಜಧಾನಿ ದೆಹಲಿ ಮೂಲದ ಆಭರಣ ಸಂಸ್ಥೆಯೊಂದು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‍ಗೆ(ಓಬಿಸಿ) 390 ಕೋಟಿ ರೂ.ಗಳನ್ನು ವಂಚಿಸಿದೆ. ಈ ಸಂಬಂಧ ದೂರು ದಾಖಲಾದ ಹಿನ್ನೆಲೆಯಲ್ಲಿ ಕೇಂದ್ರೀಯ ತನಿಖಾ ದಳ-ಸಿಬಿಐ ತನಿಖೆ ಚುರುಕುಗೊಳಿಸಿದೆ.

ವಜ್ರ, ಚಿನ್ನ ಮತ್ತು ಬೆಳ್ಳಿ ಆಭರಣಗಳ ತಯಾರಿಕೆ ಮತ್ತು ರಫ್ತು ವಹಿವಾಟಿನಲ್ಲಿ ಮುಂಚೂಣಿಯಲ್ಲಿರುವ ಕರೋಲ್ ಭಾಗ್ ಮೂಲದ ದ್ವಾರಕ್ ದಾಸ್ ಸೇಠ್ ಇಂಟರ್‍ನ್ಯಾಷನಲ್ ಸಂಸ್ಥೆಯು 2007ರಲ್ಲಿ ಓಬಿಸಿಯ ಗ್ರೇಟರ್ ಕೈಲಾಶ್-2 ಶಾಖೆಯಿಂದ ವಿವಿಧ ರೂಪಗಳಲ್ಲಿ ಸಾಲ ಎತ್ತುವಳಿ ಮಾಡಿ ಹಿಂದಿರುಗಿಸದೇ ಸತಾಯಿಸುತ್ತಾ ಇಚ್ಚಾಪೂರ್ವಕ ಸುಸ್ತಿದಾರ ಆರೋಪಕ್ಕೆ ಗುರಿಯಾಗಿದೆ. ಈ ಬಗ್ಗೆ ಪುನರಾವರ್ತಿಕ ಮನವಿಗಳು ಮತ್ತು ನೆನೆಪಿನ ಪತ್ರಗಳನ್ನು ಬ್ಯಾಂಕ್ ಸಲ್ಲಿಸಿದ್ದರೂ ಏನೂ ಪ್ರಯೋಜನವಾದ ಹಿನ್ನೆಲೆಯಲ್ಲಿ ಓಬಿಸಿ ದೂರು ದಾಖಲಿಸಿದ್ದು, ಸಿಬಿಐ ರಂಗಪ್ರವೇಶಿಸಿದೆ.

ಈ ಸಂಬಂಧ ಕಂಪನಿ, ಸಂಸ್ಥೆಯ ನಿರ್ದೇಶಕರಾದ ಸಭ್ಯ ಸೇಠ್, ರೀಟಾ ಸೇಠ್, ಕೃಷ್ಣಕುಮಾರ್ ಸಿಂಗ್, ಮತ್ತು ರವಿಸಿಂಗ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಹಗರಣದಲ್ಲೂ ಬ್ಯಾಂಕ್‍ನ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿರುವ ಸಾಧ್ಯತೆ ಇದ್ದು ತನಿಖೆ ಚುರುಕುಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ