ದಲಿತ ನಾಯಕ, ವಡ್‌ಗಾಂ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಎನ್‌ಕೌಂಟರ್‌ ಗೆ ಪೊಲೀಸರಿಂದಲೇ ಹುನ್ನಾರ..?

ನವದೆಹಲಿ:ಫೆ-24: ದಲಿತ ನಾಯಕ, ವಡ್‌ಗಾಂ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲು ಗುಜರಾತ್‌ ಪೊಲೀಸರೇ ಸಂಚು ರೂಪಿಸಿದ್ದಾರೆಯೇ..? ಇಂತದ್ದೊಂದು ಅನುಮಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಪುಷ್ಟಿ ನೀಡುತ್ತಿದೆ. ಮಾತ್ರವಲ್ಲ ಸ್ವತ: ಮೇವಾನಿಯವರು ಗುಜರಾತ್ ಪೊಲೀಸರು ನನ್ನನ್ನು ಎನ್ ಕೌಂಟರ್ ಮಾಡಲು ಸಂಚು ಹೂಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಗುಜರಾತ್‌ನ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನೊಳಗೊಂಡ ವಾಟ್ಸ್‌ಆ್ಯಪ್ ಗ್ರೂಪೊಂದರಲ್ಲಿ ಹಂಚಿಕೊಳ್ಳಲಾಗಿರುವ ಎರಡು ವಿಡಿಯೊಗಳು ಈ ಅನುಮಾನಕ್ಕೆ ಕಾರಣವಾಗಿದೆ.

’ಎಡಿಆರ್‌ ಪೊಲೀಸ್ ಆ್ಯಂಡ್ ಮೀಡಿಯಾ’ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಅಹಮದಾಬಾದ್‌ ಗ್ರಾಮೀಣ ಡಿವೈಎಸ್‌ಪಿ ಆರ್‌.ಬಿ. ದೇವ್‌ಧಾ ಹಂಚಿಕೊಂಡಿದ್ದ ವಿಡಿಯೊ ಶುಕ್ರವಾರ ವೈರಲ್ ಆಗಿತ್ತು. ರಾಜಕಾರಣಿಯಂತೆ ಕಾಣಿಸುವ ವ್ಯಕ್ತಿಯೊಬ್ಬನನ್ನು ಪೊಲೀಸರು ಹೊಡೆಯುತ್ತಿರುವ ದೃಶ್ಯ ಮೊದಲ ವಿಡಿಯೊದಲ್ಲಿದೆ. ಇನ್ನೊಂದರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎನ್‌ಕೌಂಟರ್ ವಿಷಯಕ್ಕೆ ಸಂಬಂಧಿಸಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ದೃಶ್ಯವಿದೆ. ಜತೆಗೆ, ‘ಪೊಲೀಸರ ತಂದೆಯಾಗಲು ಬಯಸುವವರನ್ನು, ಪೊಲೀಸರನ್ನು ‘ಲಖೋಟ’ ಎಂದು ಕರೆಯುವವರನ್ನು ಮತ್ತು ಪೊಲೀಸರ ವಿಡಿಯೊ ಮಾಡುವ ನಿಮ್ಮಂಥವರ ಜತೆ ಪೊಲೀಸರು ಹೀಗೆ ವರ್ತಿಸಲಿದ್ದಾರೆ. ಲೆಕ್ಕ ಚುಕ್ತಾ ಮಾಡಲಾಗುವುದು – ಗುಜರಾತ್ ಪೊಲೀಸ್’ ಎಂದು ಹೇಳಲಾಗಿದೆ.

ವಿಡಿಯೊ ಬಗ್ಗೆ ಸ್ಪ‍ಷ್ಟನೆ ನೀಡಿರುವ ಡಿವೈಎಸ್‌ಪಿ, ‘ಬೇರೊಂದು ಗ್ರೂಪಿನಲ್ಲಿ ಬಂದ ವಿಡಿಯೊವನ್ನು ಕಾಪಿ ಪೇಸ್ಟ್ ಮಾಡಿದ್ದೆನಷ್ಟೆ. ಅದನ್ನು ತಪ್ಪಾಗಿ ಬಿಂಬಿಸಲಾಗಿದೆ. ಅದು ವೈಯಕ್ತಿಕ ಸಂದೇಶವಲ್ಲ, ಬೆದರಿಕೆಯೂ ಅಲ್ಲ. ಈಗ ಅದೇ ವಿಡಿಯೊ ಇತರ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ’ ಎಂದು ಹೇಳಿದ್ದಾರೆ.

ಇನ್ನು ಜಿಗ್ನೇಶ್‌ ಮೇವಾನಿ ಅವರು ‘ನನಗೆ ಜೀವ ಬೆದರಿಕೆ ಉಂಟಾಗಿದೆ’ ಎಂದಿದ್ದಾರೆ. ಗುಜರಾತ್‌ ಪೊಲೀಸರು ನನ್ನನ್ನು ಎನ್‌ಕೌಂಟರ್‌ನಲ್ಲಿ ಕೊಂದು ಮುಗಿಸುವ ಹುನ್ನಾರ ನಡೆಸುತ್ತಿದ್ದಾರೆ.ಇದೊಂದು ಗಂಭೀರ ಪ್ರಕರಣ. ಇಬ್ಬರು ಪೊಲೀಸರು ನನ್ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ. ಈ ಕುರಿತು ಡಿಜಿಪಿ, ಗೃಹ ಸಚಿವ ಮತ್ತು ಗೃಹ ಇಲಾಖೆ ಕಾರ್ಯದರ್ಶಿಗೆ ದೂರು ನೀಡುವೆ ಎಂದು ತಿಳಿಸಿದ್ದಾರೆ.
Jignesh Mevani, alleges, Gujarat Police planning,kill him,encounter

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ