![Shobha-Karandlaje-rahul-gandhi](http://kannada.vartamitra.com/wp-content/uploads/2018/02/Shobha-Karandlaje-rahul-gandhi-678x356.jpg)
ನಗರ ಸೇರಿದಂತೆ ರಾಜ್ಯದ ದಕ್ಷಿಣ ಭಾಗದ ಹಲವು ಜಿಲ್ಲೆಗಳಲ್ಲಿ ದೌರ್ಜನ್ಯ, ಗೂಂಡಾಗಿರಿ ಮಿತಿ ಮೀರಿದೆ. ಕಾಂಗ್ರೆಸ್ ಶಾಸಕರು ಮೇರೆ ಮೀರಿ ನಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರು ಕಡಿವಾಣ ಹಾಕುವರೇ ಅಥವಾ ಹೀಗೆ ಮುಂದುವರೆಯಲು ಬಿಡುವರೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಸಂಸದೆ ಶೋಭಾಕರಂದ್ಲಾಜೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಡ್ರಗ್ಮಾಫಿಯಾ ಅತಿದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಕಳೆದ 2-3 ವರ್ಷಗಳಿಂದ ಕಾಂಗ್ರೆಸ್ ಶಾಸಕರ ಗೂಂಡಾಗಿರಿ ಅತಿಯಾಗಿದೆ.
ಗೂಂಡಾಗಳು ತಮ್ಮ ದರ್ಪವನ್ನು ಮೆರೆಯುತ್ತಿದ್ದಾರೆ. ಈ ಸರ್ಕಾರ ಇಂಥವರಿಗೆ ರಕ್ಷಣೆ ಕೊಡುತ್ತಿರುವುದರಿಂದಲೇ ಇದೆಲ್ಲಾ ಮಿತಿಮೀರುತ್ತಿದೆ. ರಾಜ್ಯದಲ್ಲಿ ಪ್ರವಾಸದಲ್ಲಿರುವ ರಾಹುಲ್ಗಾಂಧಿ ಅವರು ಇದರೆಲ್ಲದರ ಬಗ್ಗೆ ಮಾತನಾಡಲೇಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.
ಕಾಂಗ್ರೆಸಿಗರು ದರ್ಪದ ರಾಜಕಾರಣ ಮಾಡುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಶಾಸಕ ಮುನಿರತ್ನ ಮನಬಂದಂತೆ ನಡೆದುಕೊಳ್ಳುತ್ತಿದ್ದಾರೆ. ನಮ್ಮ ಕಾಪೆರ್Çರೇಟರ್ಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಸಚಿವ ಕೃಷ್ಣಬೈರೇಗೌಡರ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದಬ್ಬಾಳಿಕೆ ಮಾಡಿದ್ದಾರೆ. ಅದೇ ರೀತಿ ಕೆ.ಆರ್.ಪುರದಲ್ಲಿ ಶಾಸಕ ಬೈರತಿ ಬಸವರಾಜ ದರ್ಪಮೆರೆದಿದ್ದಾರೆ.
ಸಿಎಂ ಆಪ್ತ ನಾರಾಯಣಸ್ವಾಮಿ ಪಾಲಿಕೆ ಕಚೇರಿಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಗೂಂಡಾಗಿರಿ ನಿರಂತರವಾಗಿ ನಡೆಯುತ್ತಿದೆ. ಆದರೆ, ಬಿಜೆಪಿಯವರು ಯಾರಾದರೂ ಒಂದು ಅಕ್ಷರ ಬಾಯಿ ಬಿಟ್ಟರೆ ಅಟ್ರಾಸಿಟಿ ಕೇಸು ಹಾಕುತ್ತಾರೆ. ನಮ್ಮ ಕಾರ್ಯಕರ್ತರನ್ನು ಮನಬಂದಂತೆ ಥಳಿಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಂತಾಗಿದೆ. ಇಷ್ಟೆಲ್ಲಾ ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಸಚಿವರು ಮೌನವಹಿಸಿರುವುದು ಏಕೆ. ನೀವು ಗೂಂಡಾಗಳಿಗೆ ರಕ್ಷಣೆ ಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಉದ್ಯಮಿ ಮಗ ವಿದ್ವತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಆದರೆ, ಆತನನ್ನು ತಕ್ಷಣ ಬಂಧಿಸಲಾಗಿದೆ. 38 ಗಂಟೆಗಳ ನಂತರ ಶರಣಾಗುವಂತೆ ಮಾಡಲಾಯಿತು. ನಲಪಾಡ್ಗೂ ಡ್ರಗ್ ಮಾಫಿಯಾಗೂ ಇರುವ ಸಂಬಂಧ ಏನು? ತಕ್ಷಣ ಬಂಧಿಸಿದ್ದರೆ ಆತ ಡ್ರಗ್ ಸೇವನೆ ಮಾಡಿರುವುದು ಸಾಬೀತಾಗುತ್ತದೆ ಎಂದು ನೀವಿ ಅಡಗಿಸಿಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ಹ್ಯಾರಿಸ್ ಪ್ರಭಾವಿ ಶಾಸಕ. ಅಪರಾಧಿಗಳಿಗೆ ಅವರು ಕುಮ್ಮಕ್ಕು ಕೊಟ್ಟಿದ್ದಾರೆ. ಅಂಥಹವರನ್ನು ಜತೆಗೆ ಕೂರಿಸಿಕೊಂಡು ನೀವು ಅಧಿಕಾರಿಗಳೊಂದಿಗೆ ಮೀಟಿಂಗ್ ಮಾಡುತ್ತೀರಿ. ನೀವು ಮಾಡಿದ ನಾಟಕಕ್ಕೆ ಅಧಿಕಾರಿಗಳು ಬಲಿಪಶುಗಳಾಗುತ್ತಿದ್ದಾರೆ. ನಿಮಗೆ ತಾಕತ್ತಿದ್ದರೆ ಕೂಡಲೇ ಹ್ಯಾರಿಸ್ ಅವರಿಂದ ರಾಜೀನಾಮೆ ಪಡೆಯಬೇಕು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.