ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಆರೋಪಿಗೆ 10 ವರ್ಷಗಳ ಕಠಿಣ ಸೆರೆವಾಸ

ಮೈಸೂರು, ಫೆ.24- ವಿವಾಹವಾಗುವುದಾಗಿ ನಂಬಿಸಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಮಗುವಿನ ಜನನಕ್ಕೆ ಕಾರಣನಾಗಿದ್ದ ಆರೋಪಿಗೆ ಮೈಸೂರಿನ ಏಳನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷಗಳ ಕಠಿಣ ಸೆರೆವಾಸ ವಿಧಿಸಿ ತೀರ್ಪು ನೀಡಿದೆ.

ಎಚ್.ಡಿ.ಕೋಟೆ ತಾಲ್ಲೂಕಿನ ಹತ್ಸಾಳು ಗ್ರಾಮದ ಸ್ವಾಮಿನಾಯಕ(35) ಶಿಕ್ಷೆಗೆ ಒಳಗಾದ ವ್ಯಕ್ತಿ.

ಈತನಿಗೆ ವಿವಾಹವಾಗಿದ್ದು, ಪತ್ನಿಗೆ ಮಕ್ಕಳಾಗದ ಹಿನ್ನೆಲೆಯಲ್ಲಿ ಮತ್ತೊಂದು ವಿವಾಹ ಮಾಡಿಕೊಳ್ಳಲು ಮುಂದಾಗಿದ್ದ. ಈ ಹಿನ್ನೆಲೆಯಲ್ಲಿ 25 ವರ್ಷದ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿಕೊಂಡು ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ.

ಈ ಯುವತಿ ಗರ್ಭಿಣಿಯಾಗಿದ್ದು, ವಿವಾಹವಾಗುವಂತೆ ಒತ್ತಾಯಿಸಿದ್ದ. ಆದರೆ, ಸ್ವಾಮಿನಾಯಕ ಆಕೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದ.
ಈ ಹಿನ್ನೆಲೆಯಲ್ಲಿ ಎಚ್.ಡಿ.ಕೋಟೆ ಪೆÇಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಳು. ಈ ಬಗ್ಗೆ ನ್ಯಾಯಾಲಯ ಸಂತ್ರಸ್ಥೆಗೆ ಜನಿಸಿದ ಮಗುವನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಡಿಎನ್‍ಎ ಪರೀಕ್ಷೆಗೆ ಒಳಪಡಿಸಿದಾಗ ಮಗು ಸ್ವಾಮಿನಾಯಕನದ್ದೇ ಎಂಬುದು ಸಾಬೀತಾಯಿತು.

ಹಾಗಾಗಿ ನ್ಯಾಯಾಲಯ ಸ್ವಾಮಿನಾಯಕನನ್ನು ಅಪರಾಧಿ ಎಂದು ಪರಿಗಣಿಸಿ 10 ವರ್ಷಗಳ ಕಾಲ ಕಠಿಣ ಸಜೆ ಹಾಗೂ 35 ಸಾವಿರ ರೂ. ದಂಡ ವಿಧಿಸಿದೆ. ಸರ್ಕಾರದ ಪರವಾಗಿ ಅಭಿಯೋಜಕ ಮಹಾಂತಪ್ಪವಾದ ಮಂಡಿಸಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ