ಶ್ರವಣಬೆಳಗೊಳ: ಜೈನಕಾಶಿ ಶ್ರವಣಬೆಳಗೊಳದಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ನಡೆಯುತ್ತಿರುವ 88 ನೇ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಇಂದು ಮಾಜಿ ಪ್ರಧಾನಿಗಳು ಹಾಗೂ ಲೋಕ ಸಭಾ ಸದಸ್ಯರಾದ ಹೆಚ್.ಡಿ ದೇವೇಗೌಡರವರು ಬಾಹುಬಲಿ ಸ್ವಾಮಿಗೆ ದಂಪತಿ ಸಮೇತರಾಗಿ ಅಭಿಷೇಕ ಮಾಡಿದರು.
ಜೈನಕಾಶಿ ಶ್ರವಣಬೆಳಗೊಳವು ಹಾಸನ ಜಿಲ್ಲೆಗೆ ಕಳಶದಂತೆ, ವಿಶ್ವಕ್ಕೆ ಶಾಂತಿ ಮತ್ತು ಅಹಿಂಸೆಯನ್ನು ಸಾರಿದ ಮಹಾನ್ ವ್ಯಕ್ತಿ ಶ್ರೀ ಭಗವಾನ್ ಬಾಹುಬಲಿ ಸ್ವಾಮಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಹೇಳಿದರು.
ಮಹಾಮಸ್ತಕಾಭಿಷೇಕದ 8 ನೇ ದಿನವಾದ ಶನಿವಾರ ಮಧಾಹ್ನ ಕ್ಷೇತ್ರಕ್ಕೆ ಪತ್ನಿ ಚೆನ್ನಮ್ಮ ಅವರೊಂದಿಗೆ ಆಗಮಿಸಿ ತಮ್ಮ 85 ನೇ ಇಳಿವಯಸ್ಸಿನಲ್ಲಿಯು ಕೂಡ ಕಾಲ್ನಡಿಗೆಯಲ್ಲಿಯೆ ವಿಂಧ್ಯಗಿರಿ ಬೆಟ್ಟವನ್ನು ಸುಮಾರು 45 ನಿಮಿಷಗಳಲ್ಲಿ ಬೆಟ್ಟವನ್ನೇರಿದರು. ಇದೇ ಸಂದರ್ಭದಲ್ಲಿ ವೈದ್ಯರು ದೇವೇಗೌಡರವರ ಆರೋಗ್ಯ ತಪಸಣಾ ನಡೆಸಿದರು. ನಂತರ ಅಟ್ಟಣಿಗೆ ಏರಿ ಬಾಹುಬಲಿ ಸ್ವಾಮಿಗೆ ದಂಪತಿ ಸಮೇತರಾಗಿ ಅಭಿಷೇಕ ಮಾಡಿದರು, ಕ್ಷೇತ್ರಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಮತ್ತು ಸಂಸದರಾದ ಹೆಚ್.ಡಿ.ದೇವೆಗೌಡ ಮತ್ತು ಅವರ ಪತ್ನಿ ಚೆನ್ನಮ್ಮ ಅವರನ್ನು ಖುದ್ದಾಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿಯವರೇ ಸ್ವಾಗತಿಸುವ ಮೂಲಕ ಬರಮಾಡಿಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಬಾಹುಬಲಿ ಸ್ವಾಮಿ ನೆಲೆ ನಿಂತಿರುವ ಶ್ರವಣಬೆಳಗೊಳದಂತಹ ಪವಿತ್ರ ಸ್ಥಳ ಮತ್ತೊಂದಿಲ್ಲ, 2006 ರಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿಯೂ ಕಾಲ್ನಡಿಗೆಯಲ್ಲೇ ಬೆಟ್ಟವನ್ನೇರಿದೆ ಈ ಬಾರಿಯು ಹತ್ತಿದ್ದೇನೆ, ಆದರೆ ಮುಂದಿನ ಬಾರಿ ನನ್ನ ಆರೋಗ್ಯದ ಸ್ಥಿತಿಯ ಬಗ್ಗೆ ನನಗೆ ತಿಳಿದಿರುವುದಿಲ್ಲ. ಆದರೆ ಈ ಬಾರಿ ಕಾಲ್ನಡಿಗೆಯಲ್ಲಿ ಬರುವ ಧೃಡ ಸಂಕಲ್ಪ ಮಾಡಿದ್ದೆ ಬೆಟ್ಟ ಏರಲೂ ಬಾಹುಬಲಿ ಸ್ವಾಮಿಯೆ ನನ್ನ ಕಾಲಿಗೆ ಶಕ್ತಿ ನೀಡಿದ್ದಾರೆ ಎಂದರು.
ಬೆಟ್ಟ ಹತ್ತುವಾಗ ಅಷ್ಟೇನೂ ಆಯಾಸ ಆಗಲಿಲ್ಲ ನಾನು ಅನೇಕ ದೇವಾಲಯ ಹಾಗೂ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದ್ದೇನೆ ಆದರೆ ಇಲ್ಲಿ ಬಂದಾಗ ದೊರಕುವ ನೆಮ್ಮದಿ, ಸಂತೋಷ ಮತ್ತು ಮನಃಶಾಂತಿಯೇ ಬೇರೆ. ಮಹಾನ್ ತ್ಯಾಗಿಯಾದ ಬಾಹುಬಲಿ ಸ್ವಾಮಿಯು ತನ್ನ ಸರ್ವಸ್ವವನ್ನು ತ್ಯಾಗ ಮಾಡಿ ನಿಂತಿರುವ ಈ ಸ್ಥಳದ ಮಹತ್ವವೇ ಅದಕ್ಕೆ ಕಾರಣ ಎಂದರು.