ಹೊಸದಿಲ್ಲಿ : ಅನ್ಯ ಗ್ರಹ ಜೀವಿಗಳಿಗೆ ಸಂಬಂಧಿಸಿದ ಯುಎಫ್ಓ ಗಳು ವಿಶ್ವದ ವಿವಿಧೆಡೆ ಪತ್ತೆಯಾಗಿರುವುದು ಹಳೇ ವಿಷಯ. ಇದೀಗ ತಾಜಾ ಪ್ರಕರಣದಲ್ಲಿ ಮೌಂಟ್ ಎವರೆಸ್ಟ್ ಶೃಂಗದಲ್ಲಿ ಮತ್ತು ನಾರ್ವೆಯಲ್ಲಿ ಯುಎಫ್ಓಗಳು ಪತ್ತೆಯಾಗಿವೆ.
ಪರ್ವತಾರೋಹಿಗಳು ಮತ್ತು ಹಾಲಿವುಡ್ ಚಿತ್ರ ನಿರ್ಮಾಪಕ ಡೇವಿಡ್ ಬ್ರಿಶಿಯರ್ಸ್ ಅವರ ಅತ್ಯದ್ಭುತ ಎರಡು ಬಿಲಿಯ ಪಿಕ್ಸೆಲ್ ಫೋಟೋಗ್ರಫಿಯಲ್ಲಿ ಸೆರೆ ಹಿಡಿದಿರುವ 477 ಯುಎಫ್ಓ ಗಳ ಪೈಕಿ ಮೌಂಟ್ ಎವರೆಸ್ಟ್ ಯುಎಫ್ಓ ಒಂದಾಗಿರುವುದಾಗಿ “ಮಿರರ್’ ವರದಿ ಮಾಡಿದೆ.
ಯುಎಫ್ಓಗಳ ಪರಾಕಾಷ್ಠೆಯ ವೈಭವವನ್ನು ತೋರಿಸುವ ಉದ್ದೇಶದಿಂದ 2012ರಲ್ಲಿ ಮೊಸಾಯಿಕ್ ಇಮೇಜ್ ಸೃಷ್ಟಿಸಲಾಗಿರುವ ವೇಳೆಯೇ ನೈಜ ಯುಎಫ್ಓಗಳ ಗುರುತು, ಸ್ವರೂಪ, ಗಾತ್ರ, ವೈಖರಿ ಇಂದಿಗೂ ನಿಗೂಢವಾಗಿಯೇ ಉಳಿದಿದೆ.
ಯುಎಫ್ಓ ಬೇಟೆಗಾರರು ಮೌಂಟ್ ಎವರೆಸ್ಟ್ ಶೃಂಗದ ಆಗಸದೆತ್ತರದಲ್ಲಿ ಕಂಡುಬಂದಿರುವ ಯುಎಫ್ಓ, ಸಾಧಾರಣ ಎತ್ತರದಲ್ಲಿ ಹಾರುವ ಡ್ರೋನ್ ಅಥವಾ ಹೆಲಿಕಾಪ್ಟರ್ ಇರಲಾರದು ಎನ್ನಲಾಗಿದೆ.
ಭಾರತ – ಚೀನ ನಡುವಿನ ಲಡಾಕ್ ಗಡಿಯಲ್ಲಿ, ಅತ್ಯಂತ ದುರ್ಗಮವಾದ “ಏರಿಯಾ 51′ ಎಂದು ಗುರುತಿಸಲ್ಪಟ್ಟಿರುವ ಪ್ರದೇಶದಲ್ಲಿನ ರಹಸ್ಯ ಭೂಗತ ನೆಲೆಗಳಲ್ಲಿ ಯುಎಫ್ಓ ಇರಬಹುದೆಂಬ ಶಂಕೆಯನ್ನು ಬಹಳ ಹಿಂದೆಯೇ “ಯುಎಫ್ಓ ಟುಡೇ’ ವ್ಯಕ್ತಪಡಿಸಿ ಲೇಖನ ಪ್ರಕಟಿಸಿತ್ತು.
2017ರಲ್ಲಿ ಅಮೆರಿಕದ ಸಿಐಎ ಬಹಿರಂಗಪಡಿಸಿದ್ದ ರಹಸ್ಯ ವರ್ಗೀಕೃತ ದಾಖಲೆಗಳಲ್ಲಿ 1968ರಲ್ಲಿ ನೇಪಾಲ ಮತ್ತು ಭೂತಾನ್ನಲ್ಲಿ ಏಳು ಯುಎಫ್ಓಗಳನ್ನು ಗುರುತಿಸಲಾಗಿತ್ತೆಂಬುದನ್ನು ಉಲ್ಲೇಖಿಸಲಾಗಿದೆ.