ಬೆಂಗಳೂರು, ಫೆ.23- ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಚಾರ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಗಂಭೀರ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿತು.
ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದಾಗ, ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಮೈಸೂರಿನಲ್ಲಿ ನೀವೇ ಗೆಲ್ಲಲು ಸಾಧ್ಯವಿಲ್ಲ. ಇನ್ನು ನಿಮ್ಮ ನಿಮ್ಮ ಮಕ್ಕಳು ಎಲ್ಲಿ ಗೆಲ್ಲುತ್ತಾರೆ ಎಂದು ಹೇಳುವ ಮೂಲಕ ವಾಗ್ವಾದಕ್ಕೆ ನಾಂದಿ ಹಾಡಿದರು.
ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಇದು ನನ್ನ ಲೆಕ್ಕಾಚಾರ, ಜನರ ಲೆಕ್ಕಾಚಾರ, ಜನರು ತೀರ್ಮಾನ ಮಾಡಿದ್ದಾರೆ, ಜನರು ಮತ್ತೆ ನಮಗೆ ಆಶೀರ್ವಾದ ಮಾಡಲು ಕಾಯುತ್ತಿದ್ದಾರೆ ಎಂದರು.
ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಎಷ್ಟೋ ಕಡೆ ಸೋಲುವ ಭೀತಿಯಿಂದ ಕಾಂಗ್ರೆಸ್ನವರು ಸೀರೆ ಹಂಚುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವೇ ಬರುತ್ತೇವೆ ಎಂದರು.
ಇದಕ್ಕೆ ದನಿ ಗೂಡಿಸಿದ ಶಾಸಕ ವೈ.ಎ.ನಾರಾಯಣಸ್ವಾಮಿ, ಕಾಂಗ್ರೆಸ್ನವರು ಸೀರೆಯನ್ನಷ್ಟೇ ಅಲ್ಲ ಬೆಳ್ಳಿ ನಾಣ್ಯಗಳನ್ನೂ ಹಂಚುತ್ತಿದ್ದಾರೆ ಎಂದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಗೆಲ್ಲುವುದಿಲ್ಲ, ಆ ಕನಸು ಬೇಡ. ಮೈಸೂರಿಗೆ ಪ್ರಧಾನಿ ಬಂದಿದ್ದರು. ಆಗ ಕೇಂದ್ರ ಸಚಿವ ಅನಂತ್ಕುಮಾರ್ ಅವರೊಂದಿಗೆ ನಾನು ಮಾತನಾಡುತ್ತಾ ನಿಮ್ಮ ಸಮಾವೇಶದಲ್ಲಿ ಭಾಷಣ ಮಾಡುವುದಾಗಿ ಹೇಳಿದ್ದೆ. ಮುಂದಿನ ಚುನಾವಣೆಯಲ್ಲಿ ನಾವೇ ಗೆಲ್ಲುವುದಾಗಿಯೂ ಹೇಳಿದ್ದೆ, ಅದಕ್ಕೆ ಅನಂತ್ಕುಮಾರ್ ಅವರೇ ಸಾಕ್ಷಿ. ಆ ಸಂದರ್ಭದಲ್ಲಿ ಪ್ರಧಾನಿ ನಕ್ಕಿದ್ದರು ಎಂದರು.
ಮತ್ತೆ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಪ್ರಧಾನಿ ಅವರು ಬಿಜೆಪಿಯೇ ಗೆಲ್ಲುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುತ್ತೇ ಎಂದಾಗ ಮುಖ್ಯಮಂತ್ರಿ ಪ್ರತಿಕ್ರಿಯಿಸಿ, ಪ್ರಧಾನಿಯವರಿಗೇನೂ ಗೊತ್ತಿಲ್ಲ. ನಿಮ್ಮವರು ಹೇಳಿಕೊಟ್ಟಂತೆ ಅವರು ಹೇಳುತ್ತಾರೆ ಎಂದು ಛೇಡಿಸಿದರು.
ಆಗ ಶೆಟ್ಟರ್ ನೀವು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಪ್ರಧಾನಿ ಹೆಸರು ಹೇಳುವುದು ಸರಿಯಲ್ಲ. ಸದನದ ಸದಸ್ಯರಲ್ಲದವರ ಹೆಸರು ಹೇಳುವುದು ಸೂಕ್ತವಲ್ಲ. ನಾವು ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ಸಮಂಜಸ ಉತ್ತರ ಕೊಡಿ ಎಂದು ಹೇಳಿದರು.
ಕೃಷಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಪ್ರಧಾನಿ ಅವರ ಹೆಸರನ್ನು ಮುಖ್ಯಮಂತ್ರಿ ಪ್ರಸ್ತಾಪಿಸಿಲ್ಲ ಎಂದರು. ಶಾಸಕ ಬಿ.ಆರ್.ಪಾಟೀಲ್, ಕೃಷ್ಣಬೈರೇಗೌಡ ಅವರ ಮಾತಿಗೆ ದನಿಗೂಡಿಸಿದರು.
ಆಡಳಿತ ಪಕ್ಷದ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ದೇಶದ ತುಂಬಾ ಸುಳ್ಳು ಹೇಳುತ್ತಿರುವ ಪಕ್ಷ ನಿಮ್ಮದು ಎಂದು ಛೇಡಿಸಿದರು.
ಆಗ ಮತ್ತೆ ಮಾತನಾಡಿದ ಕೃಷ್ಣ ಬೈರೇಗೌಡ, ಇತ್ತೀಚೆಗೆ ನಡೆದ ಲೋಕಸಭೆ, ವಿಧಾನಸಭೆ ಉಪಚುನಾವಣೆಗಳಲ್ಲಿ 17 ಕ್ಷೇತ್ರಗಳಲ್ಲೂ ಬಿಜೆಪಿ ಸೋತಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದು ಬಹಳ ದೂರದ ಮಾತು, ಹಗಲು ಕನಸು ಎಂದು ಟೀಕಿಸಿದರು.
ಈ ಹಂತದಲ್ಲಿ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಏರಿದ ದನಿಯಲ್ಲಿ ವಾಗ್ವಾದ, ಮಾತಿನ ಚಕಮಕಿ ನಡೆಯಿತು.
ಬಿಜೆಪಿ ಶಾಸಕ ಸಿ.ಟಿ.ರವಿ ಮಾತನಾಡಿ, ಅಮೇಥಿ ಮತ್ತು ರಾಯ್ಬರೇಲಿ ಕಾಪೆರ್Çರೇಷನ್ಗಳಲ್ಲಿ ನೀವು ಮೂರು ಸೀಟು ಗೆಲ್ಲಲ್ಲು ಆಗಲಿಲ್ಲ ಎಂದು ತಿರುಗೇಟು ನೀಡಿದರು.
ಮತ್ತೆ ಮಾತನಾಡಿದ ಸಿಎಂ, ನಾನು ಯಾರ ಬಗ್ಗೆಯೂ ಮಾತನಾಡಿಲ್ಲ. ದೇಶದ ಪ್ರಧಾನಿ ಬಗ್ಗೆ ಗೌರವವಿದೆ. ಗೌರವದಿಂದ ಮಾತನಾಡುತ್ತಿದ್ದೇನೆ ಎಂದಾಗ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ನಡೆಯುತ್ತಿದ್ದ ವಾಗ್ವಾದಕ್ಕೆ ತೆರೆ ಬಿದ್ದಿತು.