ವಾಣಿಜ್ಯ ಕ್ಷೇತ್ರವನ್ನು ಬೆಚ್ಚಿ ಬೀಳಿಸಿರುವ ಭಾರೀ ಹಗರಣಗಳು 1.1 ಲಕ್ಷ ಕೋಟಿ ರೂ. ಸಾಲ ಮರುಪಾವತಿಸಬೇಕಿದೆ

ನವದೆಹಲಿ,ಫೆ.23-ಭಾರತದ ವಾಣಿಜ್ಯ ಕ್ಷೇತ್ರವನ್ನು ಬೆಚ್ಚಿ ಬೀಳಿಸಿರುವ ಭಾರೀ ಹಗರಣಗಳು ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಉದ್ದೇಶಪೂರ್ವಕ ಸುಸ್ತಿದಾರರಿಂದ ಬ್ಯಾಂಕ್‍ಗಳಿಗೆ 1.1 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಸಾಲ ಮರುಪಾವತಿಸಬೇಕಿದೆ.

ಸೆ.30, 2017ರ ಅವಧಿಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಉದ್ದೇಶಪೂರ್ವಕ ಸುಸ್ತಿದಾರ(ಸಾಲ ಮೊತ್ತ ಹಿಂದಿರುಗಿಸುವ ಸಾಮಥ್ರ್ಯವಿದ್ದರೂ ಅದನ್ನು ಮರುಪಾವತಿಸಲು ಇಚ್ಛಿಸದ) ವ್ಯಕ್ತಿಗಳು ಮತ್ತು ಕಂಪನಿಗಳಿಂದ ದೇಶದಲ್ಲಿನ 9000ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ 1.1 ಲಕ್ಷ ಕೋಟಿ ರೂ. ಸಾಲ ಮೊತ್ತವನ್ನು ಹಿಂದಿರುಗಿಸಬೇಕಿದೆ.

ಸುಸ್ತಿದಾರರಾಗದೆ ಸಕಾಲದಲ್ಲಿ ಮಾಸಿಕ ಕಂತನ್ನು ತಪ್ಪದೆ ಪಾವತಿಸುತ್ತಾ ಪೂರ್ಣ ಪ್ರಮಾಣದ ಸಾಲದ ಮೊತ್ತವನ್ನು ನಿಯಮಾನುಸಾರ ಹಿಂದಿರುಗಿಸುವುದಾಗಿ ಕರಾರು ಮಾಡಿಕೊಂಡಿರುವ ಸಾಲ ಎತ್ತುವಳಿದಾರರು ಇಷ್ಟು ಪ್ರಮಾಣದ ಬಾಕಿ ಉಳಿಸಿಕೊಂಡಿರುವ ಅಂಶ ಈಗ ಬೆಳಕಿಗೆ ಬಂದಿದೆ.

ದೇಶದ ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಒಂದು ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಸಾಲ ಎತ್ತುವಳಿ ಮಾಡಿ ಅದನ್ನು ಹಿಂದಿರುಗಿಸಲು ಸತಾಯಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಪುನರಾವರ್ತಿತ ನೋಟಿಸ್‍ಗಳು ಮತ್ತು ನೆನಪಿನೋಲೆಗಳನ್ನು ರವಾನಿಸಿದ್ದರೂ ಅವರು ನಿರ್ಲಕ್ಷ್ಯ ವಹಿಸಿ ಉದ್ದೇಶಪೂರ್ವಕ ಸುಸ್ತಿದಾರರಾಗಿದ್ದಾರೆ.

9000 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಂದ ಇಷ್ಟು ದೊಡ್ಡ ಮೊತ್ತದ ಸಾಲ ಎತ್ತುವಳಿ ಮಾಡಲಾಗಿದ್ದು , ಇವುಗಳಲ್ಲಿ 11 ಪ್ರತಿಷ್ಟಿತ ಕಂಪನಿಗಳು ಮತ್ತು ಉದ್ಯಮಿಗಳು ಸೇರಿದ್ದಾರೆ.

ಇವುಗಳ ವಸೂಲಾತಿಗಾಗಿ ಈಗಾಗಲೇ ಬ್ಯಾಂಕ್‍ಗಳು ಕಾನೂನು ಕ್ರಮಗಳನ್ನು ಸಹ ಕೈಗೊಂಡಿದೆ. ಕೆಲವು ಪ್ರತಿಷ್ಠಿತ ಕಂಪನಿಗಳು 26000 ಕೋಟಿ ರೂ.ಗಳಿಗೂ ಹೆಚ್ಚು ಸಾಲ ಮೊತ್ತವನ್ನು ಬಾಕಿ ಉಳಿಸಿಕೊಂಡಿವೆ.

ಪ್ರತಿಷ್ಠಿತ ಕಂಪನಿಗಳು:
ಜತ್ತಿನ ಮೆಹ್ತಾ ಪ್ರವರ್ತನೆಗೊಳಿಸಿರುವ ವಿನ್ಸನ್ ಡೈಮಂಡ್ಸ್ ಅಂಡ್ ಜ್ಯೂವೆಲರಿಸ್ ಲಿಮಿಟೆಡ್ ಮತ್ತು ಫಾರ್ ಎವರ್ ಪ್ರೀಶಿಸಿಯಸ್ ಜ್ಯುವೆಲರಿ ಅಂಡ್ ಡೈಮೆಂಡ್ ಲಿಮಿಟೆಡ್ ವಿವಿಧ ಬ್ಯಾಂಕ್‍ಗಳಿಂದ 5500 ಕೋಟಿ ರೂ.ಗಳ ಸಾಲ ಎತ್ತುವಳಿ ಮಾಡಿ ಉದ್ದೇಶಪೂರ್ವಕ ಸುಸ್ತಿದಾರ ಸಂಸ್ಥೆಯಾಗಿದೆ.

ಕಳಂಕಿತ ಉದ್ಯಮಿ, ಮದ್ಯದ ದೊರೆ ವಿಜಯ್ ಮಲ್ಯ ನೇತೃತ್ವದ ಕಿಂಗ್‍ಫಿಷರ್ ಏರ್‍ಲೈನ್ಸ್ , ಕೋಲ್ಕತ್ತ ಮೂಲದ ಆರ್‍ಇಐ ಆಗ್ರೋ, ಮಹುವಾ ಮೀಡಿಯ, ಪರ್ಲ್ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್, ಸೆಂಚುರಿ ಕಮ್ಯೂನಿಕೇಷನ್, ಪಕ್ಸಿಯಾನ್ ಪ್ರೈವೇಟ್ ಲಿಮಿಟೆಡ್, ಜೂಮ್ ಡೆವಲಪರ್ ಪ್ರೈವೇಟ್ ಲಿಮಿಟೆಡ್, ರೀಡ್ ಅಂಡ್ ಟೇಲರ್(ಇಂಡಿಯ) ಲಿಮಿಟೆಡ್, ಎಸ್.ಕುಮಾರ್ ನೇಷನ್‍ವೈಡ್ ಲಿಮಿಟೆಡ್ ಮೊದಲಾದ ಸಂಸ್ಥೆಗಳು ಸಹ ಭಾರೀ ಮೊತ್ತದ ಸಾಲ ಪಡೆದು ಮರುಪಾವತಿಗೆ ಸತಾಯಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

2013 ಮತ್ತು 2017ರ ನಡುವೆ ಉದ್ದೇಶಪೂರ್ವಕ ಸುಸ್ತಿದಾರರ ಸಾಲ ಮೊತ್ತ ಪ್ರಮಾಣವು 27,417 ಕೋಟಿ ರೂ.ಗಳಿಂದ 1.1 ಲಕ್ಷ ಕೋಟಿ ರೂ.ಗಳಿಗೆ ಏರಿರುವುದು ಹಣಕಾಸು ಅಕ್ರಮ ಅವ್ಯವಹಾರದ ವಾಸ್ತವ ಸ್ಥಿತಿಗೆ ನಿರ್ದಶನವಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ