ಏರ್‍ಸೆಲ್ ಕಂಪನಿ ಭಾರೀ ನಷ್ಟಕ್ಕೆ ಒಳಗಾಗಿದ್ದು ಸದ್ಯದಲ್ಲೇ ಬಂದ್

ನವದೆಹಲಿ, ಫೆ.23-ಸಾಕಷ್ಟು ನಿರೀಕ್ಷೆಗಳೊಂದಿಗೆ ದೂರಸಂಪರ್ಕ ಕ್ಷೇತ್ರ ಪ್ರವೇಶಿಸಿದ್ದ ಏರ್‍ಸೆಲ್ ಕಂಪನಿ ಭಾರೀ ನಷ್ಟಕ್ಕೆ ಒಳಗಾಗಿದ್ದು, ಸದ್ಯದಲ್ಲೇ ತನ್ನ ಸೇವೆಗಳನ್ನು ಬಂದ್ ಮಾಡಲಿದೆ. ಇದರಿಂದಾಗಿ ಸುಮಾರ್ 5,000 ಉದ್ಯೋಗಿಗಳ ಭವಿಷ್ಯ ಡೋಲಾಯಮಾನವಾಗಿದೆ.

ಏರ್‍ಸೆಲ್ ಕಂಪನಿ ಇತ್ತೀಚೆಗೆ ಈ ಸಂಬಂಧ ತನ್ನ ಉದ್ಯೋಗಿಗಳಿಗೆ ಮುನ್ಸೂಚನೆ ನೀಡಿದ ನಂತರ ಈ ಸಂಸ್ಥೆಯ ಅನೇಕ ನೌಕರರಿಂದ ಉದ್ಯೋಗ ಕೋರಿ ನೂರಾರು ಅರ್ಜಿಗಳು ಸ್ವೀಕೃತವಾಗಿವೆ ಎಂದು ನೇಮಕಾತಿ ಏಜೆನ್ಸಿಗಳು ಖಚಿತಪಡಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಟೆಲಿಕಾಂ ಕ್ಷೇತ್ರದಲ್ಲಿ ಮೊಬೈಲ್ ಕಂಪನಿಗಳ ನಡುವೆ ತೀವ್ರ ಪೈಪೆÇೀಟಿ ನಡೆಯುತ್ತಿದ್ದು, ಏರ್‍ಸೆಲ್‍ಗೆ ಭಾರೀ ಹಿನ್ನಡೆಯಾಗಿದೆ. ಕೆಲವು ಮೊಬೈಲ್ ಸಂಪರ್ಕ ಕಂಪನಿಗಳು ಈಗಾಗಲೇ ತನ್ನ ಸೇವೆಯನ್ನು ಬಂದ್ ಮಾಡಿವೆ. ಹೀಗಾಗಿ ಉದ್ಯೋಗ ಕಳೆದುಕೊಳ್ಳಲಿರುವ ಏರ್‍ಸೆಲ್ ನೌಕರರಿಗೆ ಕೆಲಸ ಲಭಿಸುವುದು ದುಸ್ತರವಾಗಲಿದೆ.

ಇತರ ಪ್ರತಿಷ್ಠಿತ ಸಂಸ್ಥೆಗಳಿಂದ ತೀವ್ರ ಪೈಪೆÇೀಟಿ ಎದುರಿಸಿ ಆರ್ಥಿಕ ಸಂಕಷ್ಟದ ಸುಳಿಗೆ ಏರ್‍ಸೆಲ್ ಸಿಲುಕಿದೆ. ತನಗೆ ಆಗಿರುವ ಲುಕ್ಸಾನು ಸಮರ್ಥಿಸಿಕೊಂಡು ಈ ಸಂಸ್ಥೆ ಸದ್ಯದಲ್ಲೇ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ(ಎನ್‍ಸಿಎಲ್‍ಟಿ)ಗೆ ದಿವಾಳಿತನ(ಪಾಪರುಗಿರಿ) ಅರ್ಜಿ ಸಲ್ಲಿಸಲಿದೆ. ಈ ಟೆಲಿಕಾಂ ಕಂಪನಿ 15,500 ಕೋಟಿ ರೂ.ಗಳ ಸಾಲದ ಸುಳಿಯಲ್ಲಿದೆ

ಈ ಹಿನ್ನೆಲೆಯಲ್ಲಿ ಸಂಕಷ್ಟದ ಸಮಯವನ್ನು ಎದುರಿಸಬೇಕಾಗುತ್ತದೆ ಎಂದು ತನ್ನ ಉದ್ಯೋಗಿಗಳಿಗೆ ಕಂಪನಿ ಎಚ್ಚರಿಕೆ ನೀಡಿದ್ದು, ಸದ್ಯದಲ್ಲೇ ಸೇವೆಗಳು ಕೊನೆಗೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ