ಸರಕಾರಿ ನೌಕರರಿಗೆ ಸಿಎಂ ಭರವಸೆ – ೩ರಂದು ಘೋಷಣೆ?

ಬೆಂಗಳೂರು:  ನಿನ್ನೆ ಬೆಳಗ್ಗೆ ಬೆಂಗಳೂರಿನ ಕೇಂದ್ರ ಸರ್ಕಾರಿ ನೌಕರರ ಸಂಘದಲ್ಲಿ ಮಾನ್ಯ ರಾಜ್ಯಾಧ್ಯಕ್ಷರಾದ ಶ್ರೀ ಬಿಪಿ ಮಂಜೇಗೌಡ ರವರ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರಗಳ ಸಭೆಯನ್ನು ಕರೆಯಲಾಗಿತ್ತು. ಬಹಳ ಪ್ರಮುಖವಾಗಿ ಆರನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಇಂದು ಮಾನ್ಯ ಮುಖ್ಯಮಂತ್ರಿಗಳ ಬಳಿ ಚರ್ಚಿಸಬೇಕಾದ ಪ್ರಮುಖವಾದ ವಿಷಯಗಳ ಬಗ್ಗೆ ಚರ್ಚಿಸಿ ಅಂತಿಮವಾಗಿ ಈ ಕೆಳಕಂಡ ವಿಷಯಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು .

1.ಆರನೇ ವೇತನ ಆಯೋಗ ಶಿಫಾರಸ್ಸು ಮಾಡಿರುವ ಶೇಕಡ 30% ಅನ್ನು ನೀಡಿದ್ದಾಗಿಯೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ 15% ರಷ್ಟು ಕನಿಷ್ಠ ವೇತನದ ವ್ಯತ್ಯಾಸ ಮುಂದುವರಿಯುತ್ತದೆ. ಆ ಕಾರಣಕ್ಕಾಗಿ ಶೇ 45%ರಷ್ಟು ಫಿಟ್ಮೆಂಟ್ ಸೌಲಭ್ಯವನ್ನು ನೀಡುವ ಮೂಲಕ ವೇತನದಲ್ಲಿ ವಿಲೀನ ಮಾಡಲು ಸರ್ಕಾರದ ಮುಂದೆ ಪ್ರಸ್ತಾಪಿಸಲು ತೀರ್ಮಾನಿಸಲಾಯಿತು.

2.ಕೇಂದ್ರ ಸರ್ಕಾರಿ ನೌಕರರಿಗೆ ಇರುವ ಕನಿಷ್ಠ ವೇತನ 21000.00 ದರದಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ 21000.00 ದರದಲ್ಲಿ ಕನಿಷ್ಠ ವೇತನವನ್ನು ನಿಗದಿ ಮಾಡಬೇಕೆಂದು ತೀರ್ಮಾನಿಸಲಾಯಿತು.

3.ವೇತನ ಆಯೋಗ ಶಿಫಾರಸು ಮಾಡಿರುವುದನ್ನು ಮಾರ್ಪಡಿಸಿ ದಿನಾಂಕ 1.4.2017 ರಿಂದ ಜಾರಿಗೆ ಬರುವಂತೆ ಆರ್ಥಿಕ ಸೌಲಭ್ಯಗಳು ಹಾಗೂ ವೇತನ ನಿಗದಿಯನ್ನು ಮಾಡಬೇಕೆಂದು ತೀರ್ಮಾನಿಸಲಾಯಿತು .

4.ಆರನೇ ವೇತನ ಆಯೋಗ ರೊ 400-3100 ದರದಲ್ಲಿ ವಾರ್ಷಿಕ ಬಡ್ತಿ ದರವನ್ನು ಶಿಫಾರಸು ಮಾಡಿದ್ದು,ಸದರಿ ವಾರ್ಷಿಕ ಬಡ್ತಿ ದರವನ್ನು ನೆರೆಯ ರಾಜ್ಯದ ಮಾದರಿಯಲ್ಲಿ ಮಾರ್ಪಡಿಸಿ 500-6500 ದರದಲ್ಲಿ ನೀಡುವಂತೆ ರಾಜ್ಯ ಸರ್ಕಾರದ ಮುಂದೆ ಮಂಡಿಸಲು ತೀರ್ಮಾನಿಸಲಾಯಿತು

5.ವೇತನ ಆಯೋಗ ತನ್ನ ಶಿಫಾರಸಿನಲ್ಲಿ ನಗರ ಪರಿಹಾರ ಭತ್ಯೆಯನ್ನು ಎ. ಬಿ .ವರ್ಗದ ನಗರಗಳಿಗೆ ರೂ.600.00 ಗಳಿಗೆ ಶಿಫಾರಸು ಮಾಡಿದ್ದು ಅದನ್ನು ಮಾರ್ಪಡಿಸಿ ಹೆಚ್ಚುವರಿಯಾಗಿ ರೂ 1300.00 ನಿಗದಿಪಡಿಸಲು ಸಭೆ ತೀರ್ಮಾನಿಸಿತು.

6.ಅರ್ಹತಾದಾಯಕ ಸೇವೆಯನ್ನು 33 ವರ್ಷಗಳಿಂದ 25 ವರ್ಷಗಳಿಗೆ ಇಳಿಸಲು ಸಭೆಯು ತೀರ್ಮಾನಿಸಿತು.

7.ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ಒಟ್ಟಾರೆಯಾಗಿ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮುಂದುವರಿಸಲು ಸಭೆಯು ತೀರ್ಮಾನಿಸಿತು .

8. 1.1.2018 ರಿಂದ ಜಾರಿಗೆ ಬರುವಂತೆ ಬಾಕಿ ಇರುವ ತುಟ್ಟಿ ಭತ್ಯೆಯನ್ನು ಮಂಜೂರು ಮಾಡಲು ವಿನಂತಿಸಲು ತೀರ್ಮಾನಿಸಲಾಯಿತು.

ಮೇಲ್ಕಂಡ ಎಲ್ಲಾ ಪ್ರಮುಖ 8 ವಿಚಾರಗಳ ಬಗ್ಗೆ ಸಮಸ್ತ ಸರ್ಕಾರಿ ನೌಕರರ ಶ್ರೇಯೋಭಿವೃದ್ಧಿ ಹಾಗೂ ಹಿತರಕ್ಷಣೆ- ಕ್ಷೇಮಾಭಿವೃದ್ಧಿ ಯನ್ನು ಗಮನದಲ್ಲಿಟ್ಟುಕೊಂಡು ಸಮಸ್ತ ರಾಜ್ಯದ ಸರ್ಕಾರಿ ನೌಕರರ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಈ ವಿಚಾರಗಳನ್ನು ಅವರ ಗಮನಕ್ಕೆ ತಂದು ಅವರ ಮನವೊಲಿಸಿ ಈ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಭೆಯು ತೀರ್ಮಾನಿಸಿತು . ನಂತರ ಸಂಜೆ ಆರು ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳು ಈ ವಿಚಾರ ಸಂಬಂಧ ಆಯವ್ಯಯದ ಪೂರ್ವಭಾವಿ ಸಭೆಯಲ್ಲಿ ಎಲ್ಲಾ ಅಂಶಗಳನ್ನು ಕೂಡ ಗಮನಿಸಿ ಈ ಎಲ್ಲ ವಿಚಾರಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಸರ್ಕಾರಿ ನೌಕರರಿಗೆ ಅನುಕೂಲವಾಗುವ ಎಲ್ಲ ಅಂಶಗಳನ್ನು ಕೂಡ ಪರಿಗಣಿಸುತ್ತೇನೆ೦ಬ ಸ್ಪಷ್ಟ ಭರವಸೆಯನ್ನು ನಿಯೋಗಕ್ಕೆ ನೀಡಿದ್ದಾರೆ .ಹಾಗೂ ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಮ್ಮೇಳನವನ್ನು ದಿನಾಂಕ 3.3.2018 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಡಲು ಮಾನ್ಯ ಮುಖ್ಯಮಂತ್ರಿಗಳು ಒಪ್ಪಿದ್ದು ಆ ಕಾರ್ಯಕ್ರಮದಲ್ಲಿ ಸರ್ಕಾರಿ ಆದೇಶವನ್ನು ಹೊರಡಿಸುವುದಾಗಿ ಸಹ ತಿಳಿಸಿದ್ದಾರೆ

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ