ವಾಷಿಂಗ್ಟನ್: ಭಾರತೀಯರ ಆತಂಕಕ್ಕೆ ಕಾರಣವಾಗಿರುವ ಟ್ರಂಪ್ ಸರ್ಕಾರದ ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆಗಳ ನೀತಿ 2018ರ ಜಾರಿಗೆ ಅಮೆರಿಕ ಸರ್ಕಾರ ಮುಂದಾಗಿದ್ದು, ಹೆಚ್ 1 ಬಿ ವೀಸಾ ನೀತಿ ಮತ್ತಷ್ಟು ಕಠಿಣವಾಗಿರಲಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಅಮೆರಿಕದ ಐಟಿ ಕಂಪನಿಗಳು ತಮ್ಮ ಕಾರ್ಯಕ್ಕಾಗಿ ಮೂರನೇ ಸಂಸ್ಥೆಗಳ ಉದ್ಯೋಗಿಗಳನ್ನು ಬಳಸಿಕೊಳ್ಳುವಾಗ ಅಮೆರಿಕದ ನಾಗರಿಕತ್ವ ಮತ್ತು ವಲಸೆ ಸೇವೆಗಳ ನೀತಿ 2018ಯಲ್ಲಿರುವ ಮಾನದಂಡಗಳ ಅನ್ವಯವೇ ವಿದೇಶಿ ಉದ್ಯೋಗಿಗಳಿಗೆ ಹೆಚ್ 1 ಬಿ ವೀಸಾ ನೀಡಲು ಮುಂದಾಗಿದ್ದು, ಅಮೆರಿಕ ಸರ್ಕಾರದ ಈ ನೀತಿಯಿಂದಾಗಿ ಅಮೆರಿಕದಲ್ಲಿ ಕೆಲಸ ಮಾಡುವ ವಿದೇಶಿ ಉದ್ಯೋಗಸ್ಥರಿಗೆ ಹೆಚ್ 1 ಬಿ ವೀಸಾ ಪಡೆಯಲು ಕಠಿಣವಾಗಲಿದೆ. ಪ್ರಮುಖವಾಗಿ ಅಮೆರಿಕವನ್ನೇ ಹೆಚ್ಚು ನೆಚ್ಚಿಕೊಂಡಿರುವ ಲಕ್ಷಾಂತರ ಭಾರತೀಯ ಐಟಿ ಸಂಸ್ಥೆಗಳು ಮತ್ತು ಉದ್ಯೋಗಿಗಳ ಮೇಲೆ ಇದು ನೇರ ಪರಿಣಾಮ ಬೀರಲಿದ್ದು, ಭಾರತೀಯ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಅಮೆರಿಕ ಸರ್ಕಾರ ಇದೀಗ ತನ್ನ ನೂತನ ನಾಗರಿಕತ್ವ ಮತ್ತು ವಲಸೆ ನೀತಿಯಲ್ಲಿ ಪ್ರಸ್ತಾಪಿಸಿರುವಂತೆ ನಿರ್ಧಿಷ್ಟ ಕಾರಣ ಮತ್ತು ನಿರ್ಧಿಷ್ಟ ಅವಧಿಗೆ ಮಾತ್ರ ವಿದೇಶಿಗರನ್ನು ಉದ್ಯೋಗಿಗಳಾಗಿ ಕರೆಸಿಕೊಳ್ಳಬೇಕಿದ್ದು, ಊಹಾತ್ಮಕ ಉದ್ಯೋಗ ಅಂದರೆ ಭವಿಷ್ಯದಲ್ಲಿ ದೊರೆಯಬಹುದಾದ ಯೋಜನೆಗಳಿಗೆ ಈಗಲೇ ಉದ್ಯೋಗಿಗಳನ್ನು ಅಮೆರಿಕಕ್ಕೆ ಕರೆಸಿಕೊಳ್ಳುವ ಅವಕಾಶ ನೀಡದಿರಲು ನೂತನ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದಲ್ಲದೆ ಹೀಗೆ ಕರೆಸಿಕೊಳ್ಳುವ ವಿದೇಶಿ ಉದ್ಯೋಗಸ್ಥರೂ ಕೂಡ ನೀತಿಯಲ್ಲಿ ಉಲ್ಲೇಖ ಮಾಡಿರುವ ಮಾನದಂಡಗಳ ಅಡಿಯಲ್ಲಿ ಬರಲೇಬೇಕು ಮತ್ತು ನೀತಿಯಲ್ಲಿ ಸೂಚಿಸಲಾಗಿರುವ ವಿಶೇಷ ಕೌಶಲ್ಯ ಹೊಂದಿರಬೇಕು ಎಂದು ನೂತನ ವೀಸಾ ನೀತಿಯಲ್ಲಿ ಹೇಳಲಾಗಿದೆ.