ಬೆಂಗಳೂರು, ಫೆ.22- ಕಾವೇರಿ ವಿವಾದದಲ್ಲಿ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ನದಿಯ ನೀರು ಯಾವ ರಾಜ್ಯದ ಸ್ವತ್ತೂ ಅಲ್ಲ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಮಹದಾಯಿ ವಿವಾದದಲ್ಲೂ ಕರ್ನಾಟಕಕ್ಕೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ನಡೆದ ಚರ್ಚೆಗೆ ವಿಧಾನಸಭೆಯಲ್ಲಿಂದು ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸುಪ್ರೀಂಕೋರ್ಟ್ ಅಭಿಪ್ರಾಯವನ್ನ ಆಧರಿಸಿ ಹೇಳುವುದಾದರೆ ಮಹದಾಯಿ ನೀರು ನಮ್ಮದು ಎಂದು ಗೋವಾದವರು ವಾದಿಸಲು ಆಗುವುದಿಲ್ಲ. ಹೀಗಾಗಿ ಕರ್ನಾಟಕಕ್ಕೆ ತನ್ನ ಪಾಲಿನ ನೀರು ಪಡೆದುಕೊಳ್ಳಲು ಅನುಕೂಲವಾಗಲಿದೆ. ಮಹದಾಯಿ ವಿಷಯದಲ್ಲೂ ನ್ಯಾಯಾಧೀಕರಣದ ಮುಂದೆ ನಮಗೆ ನ್ಯಾಯ ಸಿಗದಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕಾವೇರಿ ವಿವಾದದಲ್ಲಿ ಸುಪ್ರೀಂಕೋರ್ಟ್ ತೀರ್ಪಿನಿಂದ ಆ ಭಾಗದ ಜನ ನಿಟ್ಟುಸಿರು ಬಿಡುವಂತಾಗಿದೆ. ನಮ್ಮ ಸರ್ಕಾರದ ಎಲ್ಲಾ ವಾದವನ್ನು ಒಪ್ಪದೇ ಇದ್ದರೂ ಭಾಗಶಃ ವಾದವನ್ನು ಒಪ್ಪಿದೆ. ತಮಿಳುನಾಡಿನ ಅಂತರ್ಜಲದಲ್ಲಿ 30 ಟಿಎಂಸಿ ನೀರಿತ್ತು ಎಂದು ನಾವು ವಾದಿಸಿದ್ದೊ, 20 ಟಿಎಂಸಿ ಇದೆ ಎಂದು ಅಭಿಪ್ರಾಯಕ್ಕೆ ಬಂದು 10 ಟಿಎಂಸಿ ನೀರನ್ನು ಪರಿಗಣಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಅದರಂತೆ ಬಿಳಿಗೊಂಡ್ಲು ಮೂಲಕ 192 ಟಿಎಂಸಿ ಬದಲು 14.75 ಟಿಎಂಸಿ ಕಡಿಮೆ ಮಾಡಿದೆ. ಬೆಂಗಳೂರಿಗೆ 4.75 ಕುಡಿಯುವ ನೀರಿಗೆ ಕೊಟ್ಟಿದ್ದಾರೆ. ಈ ತೀರ್ಪನ್ನು ಸ್ವಾಗತಿಸುತ್ತೇನೆ. ಸಮರ್ಥ ವಾದ ಮಂಡಿಸಿದ ವಕೀಲರ ತಂಡವನ್ನು ಅಭಿನಂದಿಸುತ್ತೇನೆ ಎಂದು ಸಿಎಂ ಹೇಳಿದರು.
ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಇದಕ್ಕೆ ಪ್ರತಿಧ್ವನಿಸಿ, ಪ್ರತಿ ಹಂತದ ಸರ್ವಪಕ್ಷ ಸಭೆಯಲ್ಲಿ ವಕೀಲರ ತಂಡ ಕೆಲಸ ಮಾಡುತ್ತಿಲ್ಲ ಎಂದು ನಾವು ಟೀಕೆ ಮಾಡುತ್ತಿದ್ದೆ. ಆದರೆ, ಅಂತಿಮ ತೀರ್ಪಿನಲ್ಲಿ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ. ಹೀಗಾಗಿ ವಕೀಲರ ತಂಡವನ್ನು ನಾವು ಅಭಿನಂದಿಸುತ್ತೇವೆ ಎಂದು ಹೇಳಿದರು.
ಕಾವೇರಿ ವಿಷಯದಲ್ಲಿ ಯಾರೂ ರಾಜಕೀಯ ಮಾಡಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರು. ಮಹದಾಯಿ ವಿಷಯದಲ್ಲಿ ಬಿಜೆಪಿಯವರು ಸ್ವಲ್ಪ ರಾಜಕೀಯ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಮೇಕೆದಾಟು ಅನುಷ್ಠಾನ:
ನಮ್ಮ ಸರ್ಕಾರ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸಿ, ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಮತ್ತು ಕೃಷಿಗೆ ನೀರು ಬಳಸಿಕೊಳ್ಳಲು ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿದೆ.ಜತೆಗೆ ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರ ಜಲ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
12,992 ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆ ಜಾರಿಗೊಳಿಸಲಾಗುತ್ತಿದೆ. ಅದರಲ್ಲಿ ಏತ ನೀರಾವರಿ ಕಾಮಗಾರಿಗಳು ಈಗಾಗಲೇ ಮುಗಿದಿವೆ. ಇದರಿಂದ ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಮತ್ತು ಕುಡಿಯುವ ನೀರಿಗೆ 24 ಟಿಎಂಸಿ ನೀರು ತರಲಾಗುವುದು. ಕೆಲವರು ಎತ್ತಿನ ಹೊಳೆಯಿಂದ ನೀರುಬರುವುದಿಲ್ಲ ಎಂದು ಅಪಪ್ರಚಾರ ಮಾಡಿದ್ದಾರೆ. ತಜ್ಞರ ಅಭಿಪ್ರಾಯ ಪಡೆಯದೆ ಸರ್ಕಾ 13 ಸಾವಿರ ಕೋಟಿ ಖರ್ಚಿ ಯೋಜನೆ ಕೈಗೊಳ್ಳಲು ಸಾಧ್ಯವೇ ಎಂದು ಸಿಎಂ ಪ್ರಶ್ನಿಸಿದರು.
ಬೆಂಗಳೂರಿನ ಕೆಸಿವ್ಯಾಲಿ, ಹೆಬ್ಬಾಳ-ನÁಗವಾರ ವ್ಯಾಲಿಯಿಂದ ಚಿಕ್ಕಬಳ್ಳಾಪುರ-ಕೋಲಾರ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ರಾಜ್ಯದ 44 ತಾಲ್ಲೂಕುಗಳಲ್ಲಿ ಅಂತರ್ಜಲವನ್ನು ಮಿತಿಮೀರಿ ಬಳಸಿದ್ದರಿಂದ ವಿಕೋಪದ ಪರಿಸ್ಥಿತಿ ಇದ್ದು, ಈ ತಾಲ್ಲೂಕುಗಳಲ್ಲಿ ಬೋರ್ವೆಲ್ ಕೊರೆಯುವುದನ್ನು ನಿಷೇಧಿಸಲಾಗಿದೆ. ನಮ್ಮ ಸರ್ಕಾರ ನೀರಾವರಿಗೆ ಅದರಲ್ಲೂ ಅಂತರ್ಜಲ ಅಭಿವೃದ್ಧಿಯಾಗುವಂತಹ ಸಣ್ಣ ಕೆರೆಗಳನ್ನು ತುಂಬಿಸುವ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಒಟ್ಟು 36 ಸಾವಿರ ಕೆರೆಗಳ ಪೈಕಿ 2672 ಕೆರೆಗಳನ್ನು ತುಂಬಿಸಲು 114 ಯೋಜನೆಗಳನ್ನು ರೂಪಿಸಿದ್ದು, 8891 ಕೋಟಿ ಖುರ್ಚು ಮಾಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಂತರ್ಜಲ ವೃದ್ಧಿಯಾಗುವುದಲ್ಲದೆ, ನೀರಿನ ಸಮಸ್ಯೆ ಬಗೆಹರಿಯಬಹುದೆಂದು ವಿಶ್ವಾಸ ವ್ಯಕ್ತಪಡಿಸಿದರು.