ಬೆಂಗಳೂರು, ಫೆ.22-ಉಡುಪಿ ನಗರಕ್ಕೆ ವರಾಹಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಸಂಬಂಧ ವಿಸ್ತೃತ ಯೋಜನಾ ವರದಿ ( ಡಿಪಿಆರ್)ಗೆ 125 ಕೋಟಿ ರೂ.ಗಳ ಟೆಂಡರ್ ಕರೆದಿರುವುದನ್ನು ವಿರೋಧಿಸಿ ಮೇಲ್ಮನೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ ಒಗ್ಗಟ್ಟಾಗಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.
ಪ್ರಶ್ನೋತ್ತರ ಕಲಾಪ ಸಂದÀರ್ಭದಲ್ಲಿ ಆಡಳಿತ ಪಕ್ಷದ ಸದಸ್ಯ ಪ್ರತಾಪ್ ಚಂದ್ರಶೆಟ್ಟಿ, ಪ್ರತಿಪಕ್ಷದ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು.
ಉಡುಪಿ ನಗರಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಕೊಳವೆ ಮಾರ್ಗವು ಹಾದು ಹೋಗುವ ಮಾರ್ಗಗಳಲ್ಲಿರುವ ಗ್ರಾಮ ಪಂಚಾಯ್ತಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವದಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಪಡೆಯುತ್ತಿದ್ದು, ಮಾರ್ಗಮಧ್ಯೆಯ ಗ್ರಾಮಗಳಿಗೆ ನೀರು ಒದಗಿಸುವ ನಿಯಮವನ್ನು ಮೀರಿ ಕೊಳವೆ ಮಾರ್ಗ ಹಾದುಹೋಗುವ ಗ್ರಾಮ ಪಂಚಾಯ್ತಿಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸದೆ ನೇರವಾಗಿ ಉಡುಪಿಗೆ ಕೊಂಡೊಯ್ದು ಶುದ್ಧೀಕರಿಸಿ ಒದಗಿಸುವ ಔಚಿತ್ಯವೇನು? ಎಂದು ಪ್ರಶ್ನಿಸಿದರು.
ಉಡುಪಿ ನಗರಕ್ಕೆ ವರಾಹಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯ ಡಿಪಿಆರ್ನ್ನು ಅಮೃತ್ ಯೋಜನೆಯಡಿ ತಯಾರಿಸಲಾಗಿದೆ. 122 ಕೋಟಿ ಟೆಂಡರ್ ಕರೆÉಯಲಾಗಿದೆ. ಆ ಮಾರ್ಗದಲ್ಲಿರುವ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತದೆ ಎಂದು ಸಚಿವರು ಹೇಳಿದರು.
ಟೆಂಡರ್ ರದ್ದುಪಡಿಸುವಂತೆ ಆಗ್ರಹಿಸಿ ಪ್ರತಾಪ್ಚಂದ್ರಶೆಟ್ಟಿ, ಕೋಟಾ ಶ್ರೀನಿವಾಸಪೂಜಾರಿ ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರೋಷನ್ಬೇಗ್ ಅವರು, ಆ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಸಂಬಂಧ ಕ್ರಮಕೈಗೊಳ್ಳುವ ಬಗ್ಗೆ ಧರಣಿ ನಿರತ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟರು.