
ಹೊಸದಿಲ್ಲಿ: ನಿಮ್ಮ ಮೊಬೈಲ್ ಸಂಖ್ಯೆಗಳು ಜುಲೈ 1ರಿಂದ 13 ಅಂಕೆಗಳಾಗಿ ಬದಲಾಗುತ್ತವೆ ಎಂಬ ವದಂತಿಗಳು ಈಗಾಗಲೇ ನಿಮ್ಮ ಗಮನಕ್ಕೆ ಬಂದಿರಬಹುದು. ಆದರ ಆತಂಕ ನಿಮಗೆ ಬೇಡ, ಮೊಬೈಲ್ ಸಂಖ್ಯೆಗಳು ಈಗ ಇರುವಂತೆಯೇ 10 ಅಂಕಿಗಳಾಗಿಯೇ ಮುಂದುವರಿಯುತ್ತವೆ. ಕೆಲವು ಮಾಧ್ಯಮಗಳು ದೂರ ಸಂಪರ್ಕ ಇಲಾಖೆಯ (ಡಿಓಟಿ) ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಇಂತಹ ವರದಿ ಮಾಡಿವೆ.
ಡಿಓಟಿ ಆದೇಶ ಕೇವಲ ಎಂ2ಎಂ (ಮೆಷಿನ್ ಟು ಮೆಷಿನ್) ಗಳಿಗೆ ಮಾತ್ರ ಸೀಮಿತವಾಗಿದೆ. ಎಂ2ಎಂ ಸಂಖ್ಯೆಗಳು ಸ್ವೈಪಿಂಗ್ ಯಂತ್ರಗಳು, ಕಾರುಗಳು ಮತ್ತು ವಿದ್ಯುತ್ ಮೀಟರ್ಗಳಲ್ಲಿ ಬಳಸುವ ಸಿಮ್ಗಳಿಗೆ ನೀಡುವ ನಂಬರ್ಗಳಾಗಿವೆ.
ನಾವು ಈಗ ಬಳಸುತ್ತಿರುವ ಮೊಬೈಲ್ ಸಂಖ್ಯೆಗಳು ಹಾಗೇ ಉಳಿಯಲಿವೆ ಎಂದು ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆಗಳಾದ ಭಾರ್ತಿ ಏರ್ಟೆಲ್, ರಿಲಯನ್ಸ್ ಜಿಯೋ ಮತ್ತು ಟೆಲಿಕಾಂ ಉದ್ಯಮಗಳ ಒಕ್ಕೂಟ (ಸಿಓಎಐ) ಸ್ಪಷ್ಟಪಡಿಸಿವೆ.
ಏನಿದು ಎಂ2ಎಂ ಸಂಪರ್ಕ: ಎಂ2ಎಂ ಸಂಪರ್ಕವೆಂಬುದು ವೈರ್ಲೆಸ್ ಜಾಲದ ಮೂಲಕ ಎರಡು ಸಾಧನಗಳನ್ನು ಪರಸ್ಪರ ಮಾತು ಅಥವಾ ಕೆಲಸಕ್ಕಾಗಿ ಜೋಡಿಸವ ತಂತ್ರಜ್ಞಾನವಾಗಿದೆ. ಸ್ಮಾರ್ಟ್ ವಿದ್ಯುತ್ ಮೀಟರ್ಗಳು, ವಾಹನಗಳ ಟ್ರ್ಯಾಕಿಂಗ್ ಮತ್ತು ಇಂಧನ ತಪಾಸಣಾ ವ್ಯವಸ್ಥೆ ಹಾಗೂ ಸಂಚಾರ ನಿರ್ವಹಣೆ ಸಾಧನಗಳಿಗೆ ಸಿಮ್ ಆಧರಿತ ಎಂ2ಎಂ ಸೇವೆಯನ್ನು ಟೆಲಿಕಾಂ ಕಂಪನಿಗಳು ನೀಡುತ್ತಿವೆ.
ಸರ್ವಾಂತರಜಾಲ ಸೇವೆ (ಇಂಟರ್ನೆಟ್ ಆಫ್ ಥಿಂಗ್ಸ್- ಸಾರ್ವತ್ರಿಕ ಇಂಟರ್ನೆಟ್) ನೀಡುವಲ್ಲಿ ಇದೊಂದು ಅಗತ್ಯ ಭಾಗವಾಗಿದೆ. ಸರ್ವಾಂತರಜಾಲ ಸೇವೆ ಅತಿ ಶೀಘ್ರವಾಗಿ ಬೆಳೆಯುವ ಉದ್ಯಮ ಎಂಬುದನ್ನು ಸರಕಾರ ಗುರುತಿಸಿದೆ. ಬಾಗಿಲುಗಳ ಬೀಗದಿಂದ ತೊಡಗಿ ಧರಿಸುವ ಸಾಧನಗಳ ವರೆಗೆ (ವೇರೆಬಲ್ಸ್), ಟ್ರಾಫಿಕ್ ಸಿಗ್ನಲ್ನಿಂದ ಹಿಡಿದು ತ್ಯಾಜ್ಯ ನಿಯಂತ್ರಣ ವ್ಯವಸ್ಥೆಯ ವರೆಗೆ ಅತ್ಯಂತ ವ್ಯಾಪಕವಾದ ಸೇವೆಗಳು ಈ ಜಾಲದ ವ್ಯಾಪ್ತಿಗೆ ಬರುತ್ತವೆ.