ಬೆಂಗಳೂರು, ಫೆ.21-ಬಜೆಟ್ನ ಮಹತ್ವದ ವಿಧಾನಸಭೆ ಅಧಿವೇಶನ ಕೋರಂ ಕೊರತೆಯಿಂದಾಗಿ ಒಂದು ಗಂಟೆ ತಡವಾಗಿ ಆರಂಭವಾಯಿತು.
ಬೆಳಗ್ಗೆ 10.30ಕ್ಕೆ ಅಧಿವೇಶನದ ಸಮಯ ನಿಗದಿಯಾಗಿತ್ತು. 11.20 ಆದರೂ ಸಭಾಂಗಣದಲ್ಲಿ ಸಚಿವರು ಸೇರಿದಂತೆ 16 ಮಂದಿ ಸದಸ್ಯರು ಮಾತ್ರ ಹಾಜರಿದ್ದರು.
ಸುಮಾರು ಅರ್ಧಗಂಟೆ ಕಾಲ ಕಲಾಪದ ಕರೆಗಂಟೆ ಭಾರಿಸುತ್ತಲೇ ಇತ್ತು. ಆದರೂ ಸದನದಲ್ಲಿ ಕೋರಂ ಭರ್ತಿಯಾಗಲೇ ಇಲ್ಲ. ಕೊನೆಗೆ 11.25ಕ್ಕೆ ಸುಮಾರು 30 ಮಂದಿಯಷ್ಟು ಸದಸ್ಯರು ಹಾಜರಾದಾಗ ಕಲಾಪವನ್ನು ಆರಂಭಿಸಲಾಯಿತು.
ಆರಂಭದಲ್ಲೇ ಸಭಾಧ್ಯಕ್ಷರು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಂಡರು. ಸುಮಾರು 15 ಮಂದಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ಒದಗಿಸಲಾಗಿತ್ತು. ಆದರೆ, ಪ್ರಶ್ನೆ ಕೇಳಿದ ಶಾಸಕರ ಪೈಕಿ 11 ಮಂದಿ ಗೈರು ಹಾಜರಾಗಿದ್ದರು.
ಯಶವಂತಪುರದ ಎಸ್.ಟಿ.ಸೋಮಶೇಖರ್, ಹೆಬ್ಬಾಳ ಕ್ಷೇತ್ರದ ವೈ.ಎ.ನಾರಾಯಣಸ್ವಾಮಿ, ಹುನಗುಂದ ಕ್ಷೇತ್ರದ ವಿಜಯಾನಂದ ಕಾಶಪ್ಪನವರ್, ತುಮಕೂರು ನಗರ ಕ್ಷೇತ್ರದ ರಫೀಕ್ ಅಹಮ್ಮದ್ ಅವರು ಮಾತ್ರ ಕಲಾಪದಲ್ಲಿ ಹಾಜರಿದ್ದು, ಪ್ರಶ್ನೋತ್ತರ ಅವಧಿಯಲ್ಲಿ ಭಾಗವಹಿಸಿದ್ದರು.
ಸಚಿವರ ಸಾಲಿನಲ್ಲೂ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಈ ಸರ್ಕಾರದ ಕೊನೆಯ ಅಧಿವೇಶನ ಆಗಿರುವುದರಿಂದ ಬಹುತೇಕ ಶಾಸಕರು ಗೈರು ಹಾಜರಾಗುತ್ತಿರುವುದು ಮತ್ತು ಚುನಾವಣಾ ಕಾರ್ಯಗಳಲ್ಲಿ ಮುಳುಗಿರುವುದರಿಂದ ಹಾಜರಾತಿ ಕ್ಷೀಣಿಸುತ್ತಿದೆ. ಈ ಮೊದಲು ಬಜೆಟ್ ಅಧಿವೇಶನವನ್ನು ಫೆ.28ರವರೆಗೂ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಶಾಸಕರ ನಿರಾಸಕ್ತಿಯಿಂದಾಗಿ ಫೆ.23ಕ್ಕೆ ಮುಕ್ತಾಯಗೊಳಿಸಲು ನಿನ್ನೆ ನಡೆದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮಾರು 2,80,000 ಕೋಟಿ ಬೃಹತ್ ಮೊತ್ತದ ಬಜೆಟ್ ಮಂಡಿಸಿದ್ದಾರೆ. ಇದರ ಮೇಲೆ ಕನಿಷ್ಠ 10 ದಿನಗಳಾದರೂ ಚರ್ಚೆ ನಡೆಯಬೇಕಿತ್ತು. ಆದರೆ, ಸಲಹಾ ಸಮಿತಿಯಲ್ಲಿ ತೀರ್ಮಾನವಾದಂತೆ ಫೆ.22, 23ರಂದು ಎರಡು ದಿನ ಮಾತ್ರ ಚರ್ಚೆ ನಡೆದು, 23ರಂದೇ ಮುಖ್ಯಮಂತ್ರಿಯವರು ಉತ್ತರ ನೀಡಿದ ನಂತರ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ನಿರ್ಧರಿಸಲಾಗಿದೆ.
ಕಳೆದ ಫೆ.5ರಂದು ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣದ ಮೇಲೆ ಐದು ದಿನಗಳ ಕಾಲ ಸುದೀರ್ಘ ಚರ್ಚೆ ನಡೆದಿದೆ. ಅದಕ್ಕೆ ಇಂದು ಮಧ್ಯಾಹ್ನ ಮುಖ್ಯಮಂತ್ರಿ ಅವರು ಉತ್ತರ ನೀಡಲಿದ್ದಾರೆ. ಈ ನಡುವೆ ಹಲವಾರು ಮಹತ್ವದ ಮಸೂದೆಗಳು ಕೂಡ ಅಂಗೀಕಾರಗೊಳ್ಳಲಿವೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಶಾಸಕರಿಗೆ ಭೋಜನಕೂಟವನ್ನೂ ಆಯೋಜಿಸಿದ್ದಾರೆ.