ಬೆಂಗಳೂರು, ಫೆ.21- ಹೈದರಾಬಾದ್-ಕರ್ನಾಟಕ ಪ್ರದೇಶದ ಯುವಕರಿಗಾಗಿ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶ ಅಭಿವೃದ್ಧಿಗಾಗಿ ಕಲಬುರಗಿಯಲ್ಲಿ ಸ್ಥಾಪಿಸುತ್ತಿರುವ ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಪ್ರಸಕ್ತ ಸಾಲಿನ ಜೂನ್ನಿಂದ ಪ್ರಾರಂಭಗೊಳ್ಳಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ವಿಧಾನಪರಿಷತ್ಗೆ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಅಮರ್ನಾಥ್ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 40 ಕೋಟಿ ರೂ. ವೆಚ್ಚದಲ್ಲಿ ಈ ಕೇಂದ್ರವನ್ನು ನಿರ್ಮಿಸಲು ಶೇ.90ರಷ್ಟು ಕಾಮಗಾರಿ ಮುಗಿದಿದೆ. ಏಪ್ರಿಲ್ ತಿಂಗಳಿಗೆ ಸರ್ಕಾರಕ್ಕೆ ಗುತ್ತಿಗೆ ಪಡೆದವರು ಹಸ್ತಾಂತರಿಸಲಿದ್ದು, ಜೂನ್ ತಿಂಗಳಲ್ಲಿ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಆರಂಭವಾಗಲಿದೆ. ಸುಧಾರಿತ ಕೌಶಲ್ಯತೆ, ಮುಂದುವರೆದ ತಾಂತ್ರಿಕ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಹಾಗೂ ಕೈಗಾರಿಕೋದ್ಯಮದ ಬೇಡಿಕೆಗೆ ಅನುಗುಣವಾಗಿ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ. ಸುಸಜ್ಜಿತ ಸಮುಚ್ಚಯ, ಗ್ರಂಥಾಲಯ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.