ಬೆಂಗಳೂರು, ಫೆ.21-ಹತ್ತನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನಾ ಸಮಾರಂಭ ನಾಳೆ ಸಂಜೆ 6 ಗಂಟೆಗೆ ವಿಧಾನಸೌಧದ (ಪೂರ್ವದ್ವಾರ ಮೆಟ್ಟಿಲು) ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾಣಿಜ್ಯ ಮಂಡಳಿ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಕರ್ನಾಟಕ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ನಗರಾಭಿವೃದ್ಧಿ ಸಚಿವ ಆರ್.ರೋಷನ್ಬೇಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಎಂ.ಖರ್ಗೆ, ವಿರೋಧ ಪಕ್ಷದ ನಾಯಕರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ, ಮೇಯರ್ ಸಂಪತ್ರಾಜ್, ಮಾಜಿ ಸಚಿವ ಅಂಬರೀಶ್, ವಿಧಾನಪರಿಷತ್ ಸದಸ್ಯೆ ಜಯಮಾಲಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಖ್ಯಾತ ಹಿಂದಿ ಚಲನಚಿತ್ರ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಸೇರಿದಂತೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಟರಾದ ಶಿವರಾಜ್ಕುಮಾರ್, ಸುದೀಪ್, ದರ್ಶನ್ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.
ಸಂಜೆ 7.45ಕ್ಕೆ ಬ್ಯಾಂಕ್ವೆಟ್ ಹಾಲ್ನಲ್ಲಿ ಸಾಲ್ವಿಟೋರ್ ಫಿಕಾರಾ ಮತ್ತು ವೆಲೆಂಟಿನೋ ಪಿಕೋನ್ ನಿರ್ದೇಶನದ ಇಟ್ಸ್ ದಿ ಲಾ ಎಂಬ ಇಟಲಿ ಚಿತ್ರ ಪ್ರದರ್ಶನಗೊಳ್ಳಲಿದೆ.
ರಾಜಾಜಿನಗರದಲ್ಲಿರುವ ಒರಾಯನ್ ಮಾಲ್ನಲ್ಲಿ ಒಂದು ವಾರಗಳ ಕಾಲ ಚಿತ್ರ ಪ್ರದರ್ಶನಗೊಳ್ಳಲಿದ್ದು, 60 ರಾಷ್ಟ್ರಗಳಿಂದ ಸುಮಾರು 200 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಸಮಾರೋಪ ಸಮಾರಂಭವು ಮಾರ್ಚ್ 1 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದ್ದು, ಗೌರವಾನ್ವಿತ ರಾಜ್ಯಪಾಲರಾದ ವಿ.ಆರ್.ವಾಲಾ ಅವರು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದ ಚಿತ್ರಗಳ ನಿರ್ಮಾಪಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.