ಬೆಂಗಳೂರು, ಫೆ.21-ಶಾಸಕರ ಭವನದ ಆವರಣದಲ್ಲಿ ಶಾಸಕರಿಗಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಿದ ಸಾಂಸಾರಿಕ ಕೊಠಡಿಗಳ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಕಟ್ಟಡವು ಮೂರು ಅಂತಸ್ತುಗಳ ಪಾರ್ಕಿಂಗ್ ವ್ಯವಸ್ಥೆ ಒಳಗೊಂಡಂತೆ 44 ಕೊಠಡಿಗಳನ್ನು ಹೊಂದಿದೆ. ಪ್ರತಿ ಸಾಂಸಾರಿಕ ಕೊಠಡಿಯಲ್ಲಿ ಎರಡು ಬೆಡ್ರೂಮ್ಗಳಿವೆ.
ಮೊದಲ, ಎರಡನೇ ಹಾಗೂ ಮೂರನೇ ಮಹಡಿಯಲ್ಲಿ ತಲಾ 8 ಕೊಠಡಿಗಳು, ಒಂದು ಸಭಾಂಗಣ, ನಾಲ್ಕನೇ ಮತ್ತು ಐದನೇ ಮಹಡಿಯಲ್ಲಿ ತಲಾ 10 ಕೊಠಡಿಗಳು, ಮೂರು ಸಭಾಂಗಣಗಳು, ಎರಡು ವಿಜಿಟರ್ಸ್ ಲಾಂಜ್, ಪ್ರತಿ ಪ್ಲಾಟ್ನ ವಿಸ್ತೀರ್ಣ 1041.78 ಚದುರ ಅಡಿ ಇದ್ದು, ಹೊರಾಂಡ, ಬಾಲ್ಕಾನಿ, ಲಿವಿಂಗ್ ರೂಮ್, ಎರಡು ಬೆಡ್ರೂಮ್, ಅಡುಗೆ ಮನೆ, ಎರಡು ಶೌಚಾಲಯ ಹಾಗೂ ಸ್ನಾನದ ಮನೆ ಒಳಗೊಂಡಿವೆ. 35 ಕೋಟಿ ರೂ. ವೆಚ್ಚದಲ್ಲಿ ಈ ಸಾಂಸಾರಿಕ ಕೊಠಡಿಗಳ ಕಟ್ಟಡವನ್ನು ನಿರ್ಮಿಸಲಾಗಿದೆ.
ವಿಧಾನಸಭಾ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ವಿಧಾನಪರಿಷತ್ನ ಸಭಾಪತಿ ಡಿ.ಎಚ್.ಶಂಕರ್ಮೂರ್ತಿ, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಮೇಯರ್ ಸಂಪತ್ರಾಜ್, ವಿಧಾನಸಭೆ ಉಪಸಭಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ, ಮಾಜಿ ಸಚಿವರಾದ ಅಭಯಚಂದ್ರಜೈನ್, ಬಸವರಾಜ ಹೊರಟ್ಟಿ, ವಿಧಾನಪರಿಷತ್ನ ಉಪಸಭಾಪತಿ ಮರಿತಿಬ್ಬೇಗೌಡ, ವಿಧಾನಸಭೆ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಅಶೋಕ್ಪಟ್ಟಣ್, ವಿಧಾನಪರಿಷತ್ ಮುಖ್ಯ ಸಚೇತಕ ಐವಾನ್ ಡಿಸೋಜ, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಪುಟ್ಟಣ್ಣ ಮತ್ತಿತರರು ಪಾಲ್ಗೊಂಡಿದ್ದರು.