ರಾಜ್ಯದಲ್ಲಿ ಅನಿಲ ಭಾಗ್ಯಕ್ಕೆ ಸಿಎಂ ಚಾಲನೆ

ಬೆಂಗಳೂರು, ಫೆಬ್ರುವರಿ. 20. 2018-ಬಿಪಿಎಲ್ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ, ಸಿಲಿಂಡರ್, ಒಲೆ ವಿತರಿಸುವ `ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯುಕ್ತವಾಗಿ ಚಾಲನೆ ನೀಡಿದರು.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಿದ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಗ್ಯಾಸ್ ಸ್ಟೌ ವಿತರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಕೇಂದ್ರ ಸರ್ಕಾರವು ಉಜ್ವಲ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಆದರೆ ಅದು ಎಲ್ಲ ಜನರಿಗೂ ಪ್ರಯೋಜನವಾಗುತ್ತಿಲ್ಲ. ಇದರಿಂದಾಗಿ ನಮ್ಮ ಸರ್ಕಾರ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಜಾರಿಗೆ ತಂದಿದ್ದು, ಅನಿಲ ಸಂಪರ್ಕವನ್ನು ಹೊಂದಿರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸೇರಿದಂತೆ ಅರಣ್ಯವಾಸಿಗಳು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿರುವ ಕಟ್ಟಡ ಕಾರ್ಮಿಕರು ಈ ಯೋಜನೆಯ ಪ್ರಯೋಜನ ಪಡೆಯಲ್ಲಿದ್ದಾರೆ ಎಂದರು.

ಕರ್ನಾಟಕದಲ್ಲಿ 1.40 ಲಕ್ಷ ಬಿಪಿಎಲ್ ಕುಟುಂಬಗಳಿವೆ. ಇವರೆಲ್ಲರಿಗೂ ಅನಿಲ ಭಾಗ್ಯ ಯೋಜನೆ ಲಭ್ಯವಾಗಬೇಕೆಂಬುದು ನಮ್ಮ ಗುರಿಯಾಗಿದೆ. ಬಡವರಿಗೆ ಈಗಾಗಲೇ ನಮ್ಮ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಮೈತ್ರಿ, ಮನಸ್ವಿನಿ, ಕೃಷಿಭಾಗ್ಯ, ಶಾದಿಭಾಗ್ಯ, ಪಶುಭಾಗ್ಯ, ವಿದ್ಯಾಸಿರಿ, ಆರೋಗ್ಯ ಭಾಗ್ಯ, ಇಂದಿರಾ ಕ್ಯಾಂಟೀನ್, ರೈತರ ಸಾಲ ಮನ್ನಾ ಮಾಡಿರುವುದು ಸೇರಿದಂತೆ ಹೀಗೆ ಅನೇಕ ಯೋಜನೆಗಳು ರಾಜ್ಯದ ಎಲ್ಲ ವರ್ಗದವರಿಗೂ ಒಂದಲ್ಲಾಲ್ಲ ಒಂದು ರೀತಿ ಪ್ರಯೋಜನ ಪಡೆಯಲ್ಲಿದ್ದಾರೆ.

ಹಿಂದಿನ ಯಾವ ಸರ್ಕಾರಗಳು ಇಷ್ಟು ಯೋಜನೆಗಳನ್ನ ರಾಜ್ಯದ ಜನರಿಗೆ ಅನುಕೂಲವಾಗುವಂತೆ ಮಾಡಿರುವ ನಿದರ್ಶನಗಳಿಲ್ಲ. ಅನ್ನಭಾಗ್ಯ ಯೋಜನೆಗೆ ಪೂರಕವಾಗಿ ಈ ಅನಿಲ ಭಾಗ್ಯ ಯೋಜನೆ ಅನುಕೂಲವಾಗಲಿದೆ. ಹೆಣ್ಣು ಮಕ್ಕಳು ಹಸಿ ಸೌಧೆಯಿಂದ ಅಡುಗೆ ಮಾಡಿ ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದರು ಇದನ್ನ ತಪ್ಪಿಸಲು ನಮ್ಮ ಸರ್ಕಾರ ಉಚಿತವಾಗಿ ಗ್ಯಾಸ್ ವಿತರಣೆ ಮಾಡುತ್ತಿದೆ. ಇದರಿಂದ ಬಡವರು ನೆಮ್ಮದಿಯಾಗಿ ಅಡುಗೆ ಮಾಡಿಕೊಂಡು ಜೀವನ ಸಾಗಿಸಬಹುದಾಗಿದೆ.

ಕೇಂದ್ರ ಸರ್ಕಾರದ ಉಜ್ವಲ ಯೋಜನೆಯು ಕೇವಲ 10 ಲಕ್ಷ ಕುಟುಂಬಗಳಿಗೆ ಮಾತ್ರ ಅನುಕೂಲವಾದರೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯು 30 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ಜೊತೆಗೆ ತಪಾಸಣೆ & ಜೋಡಣೆ, ಎರಡು ಭರ್ತಿ ಸಿಲಿಂಡರ್, ರೆಗ್ಯುಲೇಟರ್, ಎರಡು ಬರ್ನರ್ ಸ್ಟೌ, ಲೈಟರ್ ಸಹ ಕೊಡಲಾಗುವುದು.

ಕೇಂದ್ರ ಸರ್ಕಾರ ಉಜ್ವಲ ಯೋಜನೆಗೆ 1600 ರೂ ನೀಡಿದರೆ ನಮ್ಮ ಸರ್ಕಾರ 4040 ರೂ ಈ ಯೋಜನೆಗೆ ಖರ್ಚು ಮಾಡಲಾಗುತ್ತಿದೆ. ಬಿಜೆಪಿಯವರು ಬರೀ ಬುರುಡೆ ಬೀಡುತ್ತಾ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಅಷ್ಟೇ.

ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್, ನಗರಾಭಿವೃದ್ಧಿ ಸಚಿವ ಆರ್. ರೋಷನ್ ಬೇಗ್, ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ, ಬಿ.ಬಿ.ಎಂ.ಪಿ. ಮೇಯರ್ ಆರ್. ಸಂಪತ್ ರಾಜ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಮತ್ತಿತರರು ಉಪಸ್ತಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ