ಬೆಂಗಳೂರು, ಫೆ.21-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2018-19ನೆ ಸಾಲಿನ ಆಯವ್ಯಯ ಜನವಿರೋಧಿಯಾಗಿದೆ ಎಂದು ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ವಿಧಾನಸಭೆಯಲ್ಲಿಂದು ಟೀಕಿಸಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಬಜೆಟ್ ಜನೋಪಯೋಗಿಯಾಗಿಲ್ಲ. ಅನುಷ್ಠಾನವೂ ಆಗುವುದಿಲ್ಲ. ಕೇವಲ ಚುನಾವಣೆ ಭರವಸೆಯ ಬಜೆಟ್ ಆಗಿದೆ ಎಂದು ಟೀಕಿಸಿದರು.
ಓದಲು ತೃಪ್ತಿ ಕೊಡುತ್ತದೆಯೇ ಹೊರತು, ಇಲಾಖಾವಾರು ಅನುದಾನ ಗಮನಿಸಿದರೆ ನಿರಾಸೆಯಾಗುತ್ತದೆ. ಬಜೆಟ್ ಅನುಷ್ಠಾನದ ವಿವರವನ್ನು ಸದನಕ್ಕೆ ಒದಗಿಸಬೇಕು. ಕಳೆದ ನಾಲ್ಕು ವರ್ಷಗಳ ಬಜೆಟ್ ಘೋಷಣೆಯಲ್ಲಿ ಆಗಿರುವ ಅನುಷ್ಠಾನ ಶೇ.50 ರಷ್ಟೂ ದಾಟಿಲ್ಲ. ಎಸ್ಸಿ-ಎಸ್ಟಿ ವರ್ಗಕ್ಕೆ ಮೀಸಲಿಟ್ಟ ಹಣವೂ ಖರ್ಚಾಗುತ್ತಿಲ್ಲ. ಹಣ ಖರ್ಚು ಮಾಡದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳುತ್ತೀರಿ. ಎಷ್ಟು ಅಧಿಕಾರಿಗಳ ಮೇಲೆ ಕೇಸು ಹಾಕಿದ್ದೀರಿ ಹೇಳಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕೊಡಗು ಸೇರಿದಂತೆ ಹಲವು ಕಡೆಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಕಂಡು ಬರುತ್ತಿದೆ. ಕಾಡು ಪ್ರಾಣಿಗಳಿಂದ ಬೆಳೆ ಹಾನಿ, ಕೆಲವು ಸಂದರ್ಭದಲ್ಲಿ ಸಾವುಗಳು ಸಹ ಸಂಭವಿಸುತ್ತವೆ. ಅಂತಹ ಸಂದರ್ಭದಲ್ಲಿ ಸೂಕ್ತ ಪರಿಹಾರ ಸಿಗುತ್ತಿಲ್ಲ. ಕಾಡು ಪ್ರಾಣಿಗಳಿಂದಾಗುವ ಸಾವು, ಬೆಳೆ ಹಾನಿಗಳಿಗೆ ಸೂಕ್ತ ಪರಿಹಾರವನ್ನು ತುರ್ತಾಗಿ ಕೊಡುವಂತಾಗಬೇಕು. ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಚುನಾವಣೆಯಲ್ಲಿ ಭರವಸೆ ನೀಡುವ ರೀತಿಯಲ್ಲಿ ಬಜೆಟ್ ಮಂಡಿಸಲಾಗಿದೆ ಎಂದು ಅವರು ಟೀಕಿಸಿದರು.