ಬೆಂಗಳೂರು, ಫೆ.21- ಮುಂದಿನ ವಿಧಾನಸಭೆ ಚುನಾವಣೆಗೆ ಭದ್ರತೆ ಒದಗಿಸಲು ಪೋಲೀಸ್ ಇಲಾಖೆಗೆ 11.45ಕೋಟಿ ಅನುದಾನವೂ ಒಳಗೊಂಡಂತೆ ಒಟ್ಟು 5,351.49ಕೋಟಿ ರೂ.ಗಳ ಮೂರನೇ ಹಾಗೂ ಅಂತಿಮ ಕಂತಿನ ಪೂರಕ ಬಜೆಟನ್ನು ವಿಧಾನಸಭೆಯಲ್ಲಿಂದು ಮಂಡಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಸಚಿವ ಎಚ್.ಕೆ.ಪಾಟೀಲ್ 29 ಇಲಾಖೆಗಳ ಪೂರಕ ಬಜೆಟನ್ನು ಮಂಡಿಸಿದರು. ಇದರಲ್ಲಿ ವಿಧಾನಸಭೆ ಚುನಾವಣೆಯ ಪ್ರಯಾಣ ಭರಿಸಲು ಪೋಲೀಸ್ ಇಲಾಖೆಗೆ 2 ಕೋಟಿ ರೂ., ಜಿಲ್ಲಾ ಪೋಲೀಸ್ ಘಟಕ ಸಾಮಾನ್ಯ ವೆಚ್ಚಕ್ಕೆ 5 ಕೋಟಿ, ನಿವೃತ್ತ ಪೋಲೀಸ್ ಸಿಬ್ಬಂದಿಗಳ ಆರೋಗ್ಯ ಯೋಜನೆಗೆ 10 ಕೋಟಿ, ಜಿಲ್ಲಾ ಪೆÇಲೀಸ್ ಘಟಕದ ಪೂರಕ ವೆಚ್ಚಕ್ಕೆ 4 ಕೋಟಿ ಸೇರಿದಂತೆ ಒಟ್ಟು ಪೋಲೀಸ್ ಇಲಾಖೆಗೆ 16.45ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ಗೆ 22.72 ಕೋಟಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಬಸ್ ಪಾಸ್ 11.16 ಕೋಟಿ ರೂ.ವನ್ನು ನೀಡಲಾಗಿದೆ.
ರೈತರ ಸಾಲ ಮನ್ನಾ ಮಾಡಿರುವ ಸರ್ಕಾರ ಅದರ ಬಾಪ್ತು 409ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಪ್ರಸ್ತಾಪಿಸಲಾಗಿದೆ. ವಾರ್ತಾ ಇಲಾಖೆಗೆ 60 ಕೋಟಿ ಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲಾಗಿದೆ.
ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕಕ್ಕೆ 15 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ದಸರಾ ಉತ್ಸವದ ಬಾಕಿ ಬಿಲ್ಗಳ ಪಾವತಿಗೆ 10.5ಕೋಟಿ ರೂ.ಗಳನ್ನು ಒದಗಿಸಲಾಗಿದೆ.