ಚೆನ್ನೈ: ತಮಿಳು ನಟ ಕಮಲ್ ಹಾಸನ್ ಅವರ ಹೊಸ ರಾಜಕೀಯ ಪಕ್ಷದ ಘೋಷಣೆಯಾಗಲಿದೆ. ಮದುರೈನಲ್ಲಿ ಇಂದು ಸಂಜೆ ನಡೆಯಲಿರುವ ಸಮಾರಂಭದಲ್ಲಿ ಹೊಸ ಪಕ್ಷ ಘೋಷಿಸುವ ಮೂಲಕ ಅಧಿಕೃತವಾಗಿ ರಾಜಕಾರಣಕ್ಕೆ ಪಾದರ್ಪಣೆ ಮಾಡಲಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ರಂಗ ಪ್ರವೇಶವಾಗಿದ್ದು, ಅವರ ಬೆನ್ನಲ್ಲೇ ಕಮಲ್ ರಾಜಕೀಯ ಪ್ರವೇಶಿಸುತ್ತಿರುವುದು ವಿಶೇಷವಾಗಿದೆ.
”ಆಡಳಿತಾರೂಢ ಎಐಎಡಿಎಂಕೆ ಅತ್ಯಂತ ಕೆಟ್ಟ ಪಕ್ಷವಾಗಿದೆ. ರಾಜ್ಯದಲ್ಲಿ ಸರಕಾರಿ ವ್ಯವಸ್ಥೆ ಜಿಡ್ಡುಗಟ್ಟಿದ್ದು, ವಿನೂತನ ಬಗೆಯ ಸುಧಾರಣೆಗಳ ಆಶಯದೊಂದಿಗೆ ಹೊಸ ಪಕ್ಷ ರಚಿಸಿದ್ದು, ನಮ್ಮ ಕಾರ್ಯನೀತಿ ಹಾಗೂ ಯೋಜನೆಗಳ ಕುರಿತು ಬುಧವಾರದ ಕಾರ್ಯಕ್ರಮದಲ್ಲಿ ಬಹಿರಂಗಪಡಿಸುತ್ತೇನೆ,” ಎಂದು ಹೇಳಿದ್ದಾರೆ. ಆರಂಭದಲ್ಲಿ ರಾಮನಾಥಪುರಂ, ಮದುರೈ, ದಿಂಡಿಗಲ್ ಜಿಲ್ಲೆಗಳಲ್ಲಿ ಪ್ರವಾಸ ಮಾಡುವ ಉದ್ದೇಶ ಹೊಂದಿರುವ ಕಮಲ್, ಸಮಾರಂಭಕ್ಕೆ ಟ್ವಿಟರ್ ಮೂಲಕ ಅಭಿಮಾನಿಗಳಿಗೆ ಆಮಂತ್ರಣ ನೀಡಿದ್ದಾರೆ. ಈ ಮಧ್ಯೆ ನಾಮ್ ತಮಿಳರ್ ಕಚ್ಚಿ ಪಕ್ಷದ ಸಂಸ್ಥಾಪಕ ಸೀಮನ್ ಅವರು ಕಮಲ್ ಹಾಸನ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.