ನವದೆಹಲಿ, ಫೆ.20-ಬ್ಯಾಂಕಿಂಗ್ ಕ್ಷೇತ್ರವನ್ನೇ ಬೆಚ್ಚಿ ಬೀಳಿಸಿದ 11,500 ಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ವಂಚನೆ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡದಿಂದ(ಎಸ್ಐಟಿ) ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ಕುರಿತು ಸುಪ್ರೀಂಕೋರ್ಟ್ ಫೆ.23ರ ಶುಕ್ರವಾರ ವಿಚಾರಣೆ ನಡೆಸಲಿದೆ.
ಈ ಸಂಬಂಧ ನಿನ್ನೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಈ ಪ್ರಕರಣದ ಅರ್ಜಿ ಕುರಿತು ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಫೆ.23ರಂದು ಎಸ್ಐಟಿ ತನಿಖೆ, ಪ್ರಮುಖ ಆರೋಪಿ ನೀರವ್ ಮೋದಿಯನ್ನು ವಿದೇಶದಿಂದ ದೇಶಕ್ಕೆ ಹಸ್ತಾಂತರ ಸೇರಿದಂತೆ ಕೆಲವು ವಿಷಯಗಳ ಬಗ್ಗೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.