ಬೆಂಗಳೂರು, ಫೆ.20-ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಪರ್ಸೆಂಟೇಜ್ ಸರ್ಕಾರ ಎಂದು ಟೀಕೆ ಮಾಡಿದ್ದಾರೆ. ರಾಜಕೀಯ ಪ್ರೇರಿತರಾಗಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವ ಇವರ ಬಳಿ ಇದಕ್ಕೆ ದಾಖಲೆ ಇದೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರು 10 ಪರ್ಸೆಂಟ್ ಸರ್ಕಾರ ಎಂದು ಆಧಾರರಹಿತವಾಗಿ ಟೀಕೆ ಮಾಡುತ್ತಿದ್ದಾರೆ. ಇದೊಂದು ಕೀಳುಮಟ್ಟದ ರಾಜಕಾರಣ. ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯಲು ಇವರು ಅರ್ಹರಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ದೇಶ ಮತ್ತು ರಾಜ್ಯ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿವೆ. ಕೃಷಿ ಕ್ಷೇತ್ರ, ಸಾಲಮನ್ನಾ, ಮಹದಾಯಿ ಇಂತಹ ಯಾವುದೇ ವಿಚಾರವನ್ನು ಮಾತನಾಡದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ಬಿಜೆಪಿಯವರು 5 ವರ್ಷ ಆಡಳಿತ ನಡೆಸಿದ್ದರೂ, ಜೈಲಿಗೆ ಹೋಗಿದ್ದಾರೆ. ಅವರನ್ನೇ ಮತ್ತೆ ಮುಂದಿನ ಮುಖ್ಯಮಂತ್ರಿ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಪಂಜಾಬ್ ನ್ಯಾಷನಲ್ ಬ್ಯಾಂಕ್ನ 11 ಸಾವಿರ ಕೋಟಿ ಅಕ್ರಮ ನಡೆದಿದ್ದರೂ, ಸುಮ್ಮನಿದ್ದಾರೆ. ನಾವಾಗಿದ್ದರೆ ಬಿಡುತ್ತಿದ್ದೆವೇ? ಇವರ ಸಹಕಾರವಿಲ್ಲದೆ ಓಡಿ ಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಗುಜರಾತ್ನಲ್ಲಿ ಲೋಕಾಯುಕ್ತರನ್ನು ನೇಮಿಸದ ಇವರು, ಭ್ರಷ್ಟಾಚಾರದ ಬಗ್ಗೆ ನಮಗೆ ಬುದ್ಧಿ ಹೇಳುತ್ತಾರೆ. ಗುಜರಾತ್ನಲ್ಲಿ ಮಾಡಬಾರದ್ದನ್ನು ಮಾಡಿ ಪ್ರಧಾನಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಹ್ಯಾರೀಸ್ ಪುತ್ರನ ವಿಚಾರದಲ್ಲಿ ಕಾನೂನು ರೀತಿಯ ಕ್ರಮಕೈಗೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಾಧ್ಯಮದವರ ಮೇಲಿನ ಹಲ್ಲೆ ವಿಚಾರದಲ್ಲೂ ಸೂಕ್ತ ಕ್ರಮ ವಹಿಸುವುದಾಗಿ ಹೇಳಿದರು.