ಬೆಂಗಳೂರು, ಫೆ.20- ಕಳೆದ ಐದು ವರ್ಷದಲ್ಲಿ ರಾಜ್ಯದಲ್ಲಿ 3593 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ದೇಶದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಎರಡನೇ ರಾಜ್ಯ ಕರ್ನಾಟಕವಾಗಿದೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿ ತಿಳಿಸಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡ ರೈತ ಪ್ರಕರಣಗಳ ಪೈಕಿ 2561 ಪ್ರಕರಣಗಳಲ್ಲಿ ಮಾತ್ರ ಪರಿಹಾರ ನೀಡಲಾಗಿದೆ. 898 ಪ್ರಕರಣಗಳಲ್ಲಿ ಪರಿಹಾರ ತಿರಸ್ಕರಿಸಲಾಗಿದೆ. 268 ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಇತ್ಯರ್ಥವಾಗಲಿಲ್ಲ ಎಂದು ಸದನದ ಗಮನ ಸೆಳೆದರು.
ರಾಷ್ಟ್ರೀಕೃತ ಬ್ಯಾಂಕ್ನ ಸಾಲ ಮನ್ನ ಮಾಡಬೇಕು:
ರಾಜ್ಯ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿದ ಸಾಲ ಮನ್ನಾ ಮಾಡಬೇಕು. ಈಗಾಗಲೇ ಉತ್ತರ ಪ್ರದೇಶದ ಸರ್ಕಾರ ಒಂದು ಲಕ್ಷದವರೆಗೂ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಿದೆ. ಅದೇ ರೀತಿ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡದೆ ರಾಜ್ಯ ಸರ್ಕಾರವೇ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಸಹಕಾರಿ ಸಂಘಗಗಳಲ್ಲಿ ರೈತರು ಮಾಡಿದ 50 ಸಾವಿರವರೆಗೂ ಸಾಲ ಮನ್ನ ಮಾಡಿರುವುದನ್ನು ಬಜೆಟ್ನಲ್ಲಿ ಒಂದು ಲಕ್ಷದವರೆಗೂ ಹೆಚ್ಚಳ ಮಾಡುತ್ತಾರೆಂಬ ನಿರೀಕ್ಷೆ ಇತ್ತು. ಆ ನಿರೀಕ್ಷೆ ಹುಸಿಯಾಗಿದೆ. ಸಹಕಾರಿ ಸಂಘಗಳಲ್ಲಿ ರೈತರು ಮಾಡಿದ ಸಾಲ ಮನ್ನ ಮಾಡಿದ್ದರಿಂದ ರಾಜ್ಯ ಸರ್ಕಾರಕ್ಕೆ 8600 ಕೋಟಿ ಹೊರೆಯಗಿದೆ. ಇದರಲ್ಲಿ ರಾಜ್ಯ ಸರ್ಕಾರ ಪಾವತಿಸಬೇಕಾಗಿರುವುದು ಇನ್ನು 6ಸಾವಿರ ಕೋಟಿ ಬಾಕಿ ಇದೆ. ಈ ಸರ್ಕಾರದ ಅವಧಿ ಮುಗಿಯುತ್ತಿದೆ. ಮುಂದಿನ ಸರ್ಕಾರ ಈ ಹಣವನ್ನು ತುಂಬಬೇಕಾಗಿದೆ ಎಂದರು.
ಮುಂದೆ ನಮ್ಮ ಸರ್ಕಾರವೇ ಬರಲಿದ್ದು, ರೈತರ ಹಿತದೃಷ್ಟಿಯಿಂದ ಆ ಹಣ ತುಂಬುವುದಾಗಿ ಶೆಟ್ಟರ್ ಹೇಳಿದಾಗ ಆಡಳಿತ ಪಕ್ಷದ ಕಡೆಯಿಂದ ನಿಮ್ಮ ಸರ್ಕಾರ ಬರುವುದಿಲ್ಲ. ನಾವೇ ಮುಂದುವರೆಯುತ್ತೇವೆ ಎಂಬ ಮಾತು ಕೇಳಿ ಬಂತು.
ಮಾತು ಮುಂದುವರೆಸಿದ ಶೆಟ್ಟರ್, ಸರ್ಕಾರ ಯಾವುದೇ ಇರಲಿ ನಿರ್ಧಾರಗಳು ಮುಂದುವರೆಯುತ್ತವೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆಯವರು 13 ಬಜೆಟ್ಗಳನ್ನು ಮಂಡಿಸಿದ್ದರು. ಈಗ ಸಿದ್ದರಾಮಯ್ಯ ಅವರು 13 ಬಜೆಟ್ಗಳನ್ನು ಮಂಡಿಸಿ ಅವರ ದಾಖಲೆಯನ್ನು ಸರಿದೂಗಿಸಿದ್ದಾರೆ ಎಂದು ಶೆಟ್ಟರ್ ತಿಳಿಸಿದರು.