ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕುಟುಂಬ ರಾಜಕಾರಣವೇ ಮೇಳೈಸುವ ಲಕ್ಷಣಗಳು

ಬೆಂಗಳೂರು, ಫೆ.20- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿಯೂ ಕುಟುಂಬ ರಾಜಕಾರಣವೇ ಮೇಳೈಸುವ ಲಕ್ಷಣಗಳು ಗೋಚರಿಸಿವೆ.

ಗ್ರಾಮ ಪಂಚಾಯ್ತಿಯಿಂದ ಲೋಕಸಭೆವರೆಗೂ ತಮ್ಮ ಕುಟುಂಬದವರೇ ರಾಜಕಾರಣದಲ್ಲಿ ಇರಬೇಕೆಂದು ಹಪಹಪಿಸುವ ತಂದೆ-ತಾಯಿಗಳು ತಮ್ಮ ಜೀವಿತ ಅವಧಿಯಲ್ಲಿ ಒಂದು ಬಾರಿಯಾದರೂ ತಮ್ಮ ಮಕ್ಕಳು ರಾಜಕಾರಣದಲ್ಲಿ ಗೆದ್ದು ಬರಲಿ ಎಂದು ಬಯಸುವುದು ಹೆಚ್ಚಾಗುತ್ತಲೇ ಇದೆ.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹಿಡಿದು ಮಾಜಿ ಮುಖ್ಯಮಂತ್ರಿಗಳು, ಸಚಿವರು, ಮಾಜಿ ಸಚಿವರು, ಹಾಲಿ ಶಾಸಕರು, ಮಾಜಿ ಶಾಸಕರು ತಮ್ಮ ಪುತ್ರ, ಪುತ್ರಿಯರಿಗೆ ಟಿಕೆಟ್ ಕೊಡಿಸಲು ಈಗಾಗಲೇ ಕಸರತ್ತು ಆರಂಭಿಸಿದ್ದಾರೆ.

ಜೀವನದುದ್ದಕ್ಕೂ ಕುಟುಂಬ ರಾಜಕರಣ ವಿರೋಧಿಸಿಕೊಂಡು ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹಿಡಿದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಈ ಚುನಾವಣೆಯಲ್ಲಿ ತಮ್ಮ ಪುತ್ರರತ್ನರನ್ನು ಪ್ರತಿಷ್ಠಾಪಿಸಲು ಸುರಕ್ಷಿತ ಕ್ಷೇತ್ರಗಳ ಶೋಧದಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್‍ನ ವಂಶಪರಂಪರೆ ರಾಜಕಾರಣವನ್ನು ಅತಿಯಾಗಿ ಟೀಕಿಸಿದವರು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ. ಜನತಾ ಪರಿವಾರದಲ್ಲಿದ್ದಾಗ ತಾಯಿ-ಮಕ್ಕಳ ಪಕ್ಷವೆಂದೇ ಕಾಂಗ್ರೆಸ್ ಪಕ್ಷ ಹಾಗೂ ಅದರ ಅಧ್ಯಕ್ಷೆಯಾಗಿದ್ದ ಸೋನಿಯಾಗಾಂಧಿ ಹಾಗೂ ಈಗಿನ ಅಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ಹಿಗ್ಗಾಮುಗ್ಗ ಜಾಡಿಸಿದ್ದವರು ಇವರೇ.

ಇದೀಗ ಸಿದ್ದರಾಮಯ್ಯನವರೇ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದಿದ್ದಾರೆ. ತಮ್ಮ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರನ್ನು ಚುನಾವಣಾ ಅಖಾಡಕ್ಕೆ ಸಿದ್ದಗೊಳಿಸಿದ್ದರಾದರೂ ವಿಧಿ ಆಟವೇ ಬೇರೆಯಾಗಿತ್ತು. ಇದೀಗ ಕಿರಿಯ ಪುತ್ರ ಡಾ.ಯತೀಂದ್ರ ಅವರನ್ನು ಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ವೇದಿಕೆ ಸಿದ್ದಪಡಿಸಿದ್ದಾರೆ.

ತಾವು ಪ್ರತಿನಿಧಿಸುತ್ತಿರುವ ವರುಣಾದಿಂದ ಡಾ.ಯತೀಂದ್ರ ಅವರಿಗೆ ಹಾಗೂ ಜೀವನದ ಕೊನೆ ಚುನಾವಣೆ ಎದುರಿಸುತ್ತಿರುವ ಮತ್ತು ತಮಗೆ ರಾಜಕೀಯ ಪುನರ್ ಜೀವನ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ.

ಬಿ.ವೈ.ರಾಘವೇಂದ್ರ:
ಕಾಂಗ್ರೆಸ್‍ನ ಕುಟುಂಬ ರಾಜಕಾರಣವನ್ನು ಅತಿಯಾಗಿ ಟೀಕಿಸಿದವರಲ್ಲಿ ಮೊದಲಿಗರೆಂದರೆ ಬಿಜೆಪಿಯವರು. ಗಾಂಧಿ ಕುಟುಂಬದವರನ್ನು ವಾಚಾಮಗೋಚರವಾಗಿ ಟೀಕಿಸಿ ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದು ಬಿಜೆಪಿಯ ಎರಡು ಧೃವಗಳಾದ ಅಟಲ್‍ಬಿಹಾರಿ ವಾಜಪೇಯಿ ಹಾಗೂ ಭೀಷ್ಮ ಪಿತಾಮಹಾ ಎನಿಸಿಕೊಂಡ ಲಾಲ್‍ಕೃಷ್ಣ ಅಡ್ವಾಣಿ.

ವಾಜಪೇಯಿ ಅವರು ಬ್ರಹ್ಮಚಾರಿಯಾದರೂ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದ್ದರೂ. ತಮ್ಮ ದತ್ತು ಮಕ್ಕಳನ್ನಾಗಲಿ, ಕುಟುಂಬವರನ್ನೂ ಹತ್ತಿರಕ್ಕೆ ಬಿಟ್ಟುಕೊಂಡಿರಲಿಲ್ಲ.

ಇನ್ನು ಅಡ್ವಾಣಿ ಕೂಡ ಇದಕ್ಕೆ ಹೊರತಾದವರಲ್ಲ. ಆದರೆ, ಇದೇ ಪಕ್ಷದ ಹಿರಿಯ ನೇತಾರ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ತಮ್ಮ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಶಿವಮೊಗ್ಗ ಕ್ಷೇತ್ರದಿಂದ ಅಖಾಡಕ್ಕಿಳಿಸಿ ಕಾಂಗ್ರೆಸ್‍ಗಿಂತ ಬಿಜೆಪಿ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದರು.

ಇದೀಗ ರಾಘವೇಂದ್ರ ಶಿಕಾರಿಪುರದ ಶಾಸಕರಾಗಿದ್ದರೂ ಅಪ್ಪನಿಗಾಗಿ ಕ್ಷೇತ್ರವನ್ನು ತ್ಯಾಗ ಮಾಡಬೇಕಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಆಗಿರುವುದರಿಂದ ರಾಘವೇಂದ್ರ ರಾಣೇಬೆನ್ನೂರು ಕ್ಷೇತ್ರದತ್ತ ವಲಸೆಹೋಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಇನ್ನು ಮಾಜಿ ಮುಖ್ಯಮಂತ್ರಿಗಳಾದ ದಿ.ಗುಂಡೂರಾವ್, ಎಸ್.ಬಂಗಾರಪ್ಪ, ಧರ್ಮಸಿಂಗ್, ವೀರೇಂದ್ರಪಾಟೀಲ್ ಅವರ ಪುತ್ರರೂ ಈಗಾಗಲೇ ರಾಜಕೀಯ ಭವಿಷ್ಯ ಕಂಡು ಕೊಂಡಿದ್ದಾರೆ.

ಇದರಲ್ಲಿ ಗುಂಡೂರಾವ್ ಅವರ ಪುತ್ರರಾದ ದಿನೇಶ್‍ಗುಂಡೂರಾವ್ ಈಗಾಗಲೇ ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಈ ಬಾರಿ ಅವರು ಐದನೆ ಬಾರಿಗೆ ಅದೃಷ್ಟವನ್ನು ಪಣಕ್ಕಿಟ್ಟಿದ್ದಾರೆ.

ಜನತಾ ಪರಿವಾರದ ಹಿರಿಯ ಕೊಂಡಿ ಎಸ್.ಆರ್.ಬೊಮ್ಮಾಯಿ ಪುತ್ರ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಗೆದ್ದು ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ.

ಒಂದು ಕಾಲದಲ್ಲಿ ಸೋಲಿಲ್ಲದ ಸರದಾರರೆಂದೇ ಗುರುತಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಪುತ್ರ ಡಾ.ಅಜಯ್‍ಸಿಂಗ್ ಒಂದು ಬಾರಿ ಸೋತು, ಮತ್ತೊಂದು ಬಾರಿ ಗೆದ್ದಿದ್ದಾರೆ. ತಮ್ಮ ತಂದೆ ಪ್ರತಿನಿಧಿಸುತ್ತಿದ್ದ ಜೆವರ್ಗಿ ಕ್ಷೇತ್ರದಿಂದ ಅವರು ಎರಡನೇ ಬಾರಿಗೆ ಅಖಾಡಕ್ಕಿಳಿಯಲು ಸಜ್ಜಾಗುತ್ತಿದ್ದಾರೆ.

ಸಮಾಜವಾದಿ ಹಿನ್ನೆಲೆಯಿಂದ ಬಂದು ಕಾಂಗ್ರೆಸ್ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳನ್ನು ಹುಟ್ಟು ಹಾಕಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರರು ಒಂದೇ ಕ್ಷೇತ್ರದಲ್ಲಿ ಅಖಾಡಕ್ಕಿಳಿಯುತ್ತಿರುವುದು ಈ ಚುನಾವಣೆಯ ವಿಶೇಷ.

ಹುಟ್ಟುತ್ತಾ ಅಣ್ಣತಮ್ಮಂದಿರಾದರೂ ಬೆಳೆಯುತ್ತಾ ದಾಯಾದಿಗಳು ಎಂಬ ನಾಣ್ನುಡಿಯಂತೆ ಬಂಗಾರಪ್ಪನವರ ಪುತ್ರರಾದ ಕುಮಾರ್‍ಬಂಗಾರಪ್ಪ, ಮಧುಬಂಗಾರಪ್ಪ ಮತ್ತೆ ಸೊರಬದಲ್ಲಿ ಮುಖಾಮುಖಿಯಾಗುವ ಲಕ್ಷಣಗಳಿವೆ.

ಕುಮಾರ್‍ಬಂಗಾರಪ್ಪ ಈ ಹಿಂದೆ ಶಾಸಕರು ಹಾಗೂ ಸಚಿವರಾದವರು. ಕಾಂಗ್ರೆಸ್ ಬಿಟ್ಟು ಬಿಜೆಪಿಯಲ್ಲಿ ಅವರು ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿ ದಿ.ವಿರೇಂದ್ರಪಾಟೀಲ್ ಅವರ ಪುತ್ರ ಕೈಲಾಸ್‍ನಾಥ್ ಪಾಟೀಲ್ ಗುಲ್ಬರ್ಗದ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಒಂದು ಬಾರಿ ಸ್ಪರ್ಧಿಸಿದ್ದರು.

ತಮ್ಮ ಹಾಸ್ಯದ ಮಾತಿನ ಮೂಲಕ ಎದುರಾಳಿಗಳನ್ನು ಒಂದೇ ಹೊಡೆತದಲ್ಲಿ ಕಟ್ಟಿಹಾಕುತ್ತಿದ್ದ ಸಮಾಜವಾದಿ ಚಿಂತಕ ದಿ.ಜೆ.ಎಚ್.ಪಟೇಲ್ ಪುತ್ರ ಮಹಿಮಾ ಪಟೇಲ್ ದಾವಣಗೆರೆ ಜಿಲ್ಲೆ ಚೆನ್ನಗಿರಿಯಿಂದ ಅಖಾಡಕ್ಕಿಳಿಯಲಿದ್ದಾರೆ.

ಸಂಸದರು, ಸಚಿವರು, ಶಾಸಕರ ಪುತ್ರರು ಅಖಾಡಕ್ಕೆ:
ಇದೇ ರೀತಿ ಕೆಲವು ಹಾಲಿ ಹಾಗೂ ಮಾಜಿ ಸಂಸದರು, ಸಚಿವರು ಮತ್ತು ಶಾಸಕರ ಪುತ್ರರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವುದು ಮತ್ತೊಂದು ವಿಶೇಷ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರ ಪುತ್ರ ಸಂತೋಷ್ ಜಯಚಂದ್ರ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಹೈಕಮಾಂಡ್‍ನಲ್ಲಿ ತಮ್ಮದೇ ಪ್ರಭಾವ ಇಟ್ಟುಕೊಂಡಿರುವ ಜಯಚಂದ್ರ ಅವರು ತಮ್ಮ ಪುತ್ರನಿಗಾಗಿ ಟಿಕೆಟ್ ಕೊಡಿಸಲು ಲಾಬಿ ನಡೆಸಿದ್ದಾರೆ.

ಗೃಹ ಸಚಿವ ರಾಮಲಿಂಗಾರೆಡ್ಡಿ ತಮ್ಮ ಪುತ್ರಿ ಸೌಮ್ಯರೆಡ್ಡಿ ಅವರಿಗೆ ಜಯನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೊಡಿಸಲು ಲಾಬಿ ಪ್ರಾರಂಭಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಮ್ಮ ಪುತ್ರನಿಗಾಗಿ ಕ್ಷೇತ್ರವನ್ನೇ ತ್ಯಾಗ ಮಾಡಿ ಬೆಂಗಳೂರಿನತ್ತ ವಲಸೆ ಬಂದಿದ್ದಾರೆ.

ಈವರೆಗೂ ಮೈಸೂರು ಜಿಲ್ಲೆ ಟಿ.ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಮಹದೇವಪ್ಪ ಇದೀಗ ಬೆಂಗಳೂರಿನ ಸರ್.ಸಿ.ವಿ.ರಾಮನ್‍ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅಣಿಯಾಗಿದ್ದಾರೆ.

ತಮ್ಮ ಪುತ್ರ ಸುನಿಲ್‍ಬೋಸ್‍ಗೆ ಟಿ.ನರಸೀಪುರ ಅಥವಾ ನಂಜನಗೂಡು ಕ್ಷೇತ್ರದಿಂದ ಟಿಕೆಟ್ ಕೊಡಿಸುವುದು ಅವರ ಗುರಿಯಾಗಿದೆ.

ಇದೇ ರೀತಿ ಸಂಸದ ಕೆ.ಎಚ್.ಮುನಿಯಪ್ಪ ತಮ್ಮ ಪುತ್ರಿ ರೂಪಗೆ ಕೋಲಾರ ಜಿಲ್ಲೆ ಕೆಜಿಎಫ್ ಮೀಸಲು ವಿಧಾನಸಭಾ ಕ್ಷೇತ್ರದಿಂದ, ಮಧುಗಿರಿ ಶಾಸಕ ಎನ್.ರಾಜಣ್ಣ ಅವರ ಪುತ್ರ ರಾಜೇಂದ್ರ ತುಮಕೂರು ಗ್ರಾಮಾಂತರ, ಮಾಜಿ ಹಾಗೂ ಹಾಲಿ ಶಾಸಕ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣನನ್ನು ಆರ್‍ಆರ್‍ನಗರ ಇಲ್ಲವೇ ಬೇಲೂರು ಸೇರಿದಂತೆ ಇನ್ನೂ ಅನೇಕರು ತಮ್ಮ ಕುಟುಂಬದವರಿಗೆ ಟಿಕೆಟ್ ಕೊಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ